ವರದಿ : ದಿನೇಶ್ ರಾಯಪ್ಪನಮಠ
ಉಡುಪಿ: ಮಣಿಪಾಲದ ಟ್ಯಾಪ್ಮಿಯಿಂದ ಅಂಗಡಿಬೆಟ್ಟು ನೆಲ್ಲಿಕಟ್ಟೆ ಮೂಲಕ ಕಾಜಾರಗುತ್ತು
ಸಂಪರ್ಕಿಸುವ ರಸ್ತೆಯ ಕಾಮಗಾರಿ ಸಂಪೂರ್ಣವಾಗದೇ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ತೊಂದರೆ ಆಗುತ್ತಿದೆ. ಈ ರಸ್ತೆಯ ಕಾಮಗಾರಿಯನ್ನು ಶೀಘ್ರವೇ ಪೂರ್ಣಗೊಳಿಸಬೇಕೆಂದು ಆಗ್ರಹಿಸಿ ಹಿರೇಬೆಟ್ಟು ಗ್ರಾ.ಪಂ ನ ಮುಂಭಾಗ ಗುರುವಾರ ಸಾರ್ವಜನಿಕರು ಪ್ರತಿಭಟನೆ ನಡೆಸಿ ಪಂ. ಪಿಡಿಓ ಗೆ ಮನವಿ ಪತ್ರ ನೀಡಿದರು.
ಗುರುವಾರ ಬೆಳಿಗ್ಗೆ ಹಿರೇಬೆಟ್ಟು ಗ್ರಾ.ಪಂ ಕಾರ್ಯಲಯದ ಮುಂಭಾಗ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ. ತಾ.ಪಂ ಸದಸ್ಯರಾದ ಲಕ್ಷ್ಮೀನಾರಾಯಣ ಪ್ರಭು, ಆಡಳಿತ ವ್ಯವಸ್ಥೆಯ ಲೋಪದಿಂದಾಗಿ ಈ ರಸ್ತೆ ಕಾಮಗಾರಿ ಪೂರ್ಣಗೊಂಡಿಲ್ಲ. ಕಾಮಗಾರಿ ಪೂರ್ಣಗೊಳ್ಳದೇ ಜನರ ಓಡಾಟಕ್ಕೆ ಸಮಸ್ಯೆಯಾಗುತ್ತಿದೆ ಎಂದು ಪಂಚಾಯತ್ ನ ಗಮನಕ್ಕೆ ತಂದಿದ್ದೇವೆ. ಅವರು ಸಂಭಂದ ಇಲಾಖೆಯೊಂದಿಗೆ ಸಂವಹನ ನಡೆಸಿ ಕಾಮಗಾರಿ ಪೂರ್ಣಗೊಳಿಸುವುದರ ಕುರಿತು ಕ್ರಮ ಕೈಗೊಳ್ಳಬೇಕಿತ್ತು. ಆದರೆ ಪಂಚಾಯತ್ ನವರು ಮುತುವರ್ಜಿ ವಹಿಸದೇ ನಿರ್ಲಕ್ಷ್ಯ ತೋರಿದ್ದಾರೆ.
ಈ ರಸ್ತೆಯ ಮೂಲಕವೇ ಇಲ್ಲಿನ ನಿವಾಸಿಗಳು ಮಣಿಪಾಲ, ಉಡುಪಿಗೆ ತೆರಳಬೇಕಾಗಿದೆ. ಆದರೆ ಜೆ.ಸಿ.ಬಿಯಿಂದ ರಸ್ತೆಯನ್ನು ಅಗಲ ಮಾಡಿದ್ದು, ಮಳೆಯಿಂದ ರಸ್ತೆಗೆ ಹಾಕಿದ ಮಣ್ಣು ಕೊಚ್ಚಿ ಹೋಗಿ ನಡು ರಸ್ತೆಯಲ್ಲಿ ಹೊಂಡಗಳು ಸೃಷ್ಠಿಯಾಗಿದೆ. ಬೈಕ್ ಸವಾರರಿಗಂತೂ ಈ ರಸ್ತೆಯಲ್ಲಿ ಸಾಗುವುದು ದುಸ್ಸಾಹಸವಾಗಿದೆ ಎಂದು ಹೇಳಿದರು.


ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಪಂ.ಸದಸ್ಯ ಯತೀಶ್ ಶೆಟ್ಟಿ, ಹಿರೇಬೆಟ್ಟು ರಸ್ತೆಯಲ್ಲಿ ಪ್ರತಿನಿತ್ಯ ನೂರಾರು ಜನ ಓಡಾಡುತ್ತಾರೆ. ಆದರೆ ಈಗ ಯಾರೇ ಓಡಾಡಿದರೂ ರಸ್ತೆಯ ಅವಸ್ಥೆ ಕಂಡು ಜನಪ್ರತಿನಿಧಿಗಳಿಗೆ ಶಾಪ ಹಾಕುತ್ತಿದ್ದಾರೆ. ರಿಕ್ಷಾದವರು ಈ ರಸ್ತೆಗೆ ಬಾಡಿಗೆಗೆ ಬರುತ್ತಿಲ್ಲ. ಸಾಲು ಸಾಲು ಸಮಸ್ಯೆಗಳಿದ್ದರೂ ಜನರಿಂದ ಆಯ್ಕೆಯಾದವರು ಮೌನವಾಗಿದ್ದಾರೆ. ಸಂಭಂದ ಪಟ್ಟವರು ಈ ರಸ್ತೆಯ ಕಾಮಗಾರಿಯನ್ನು ಶೀಘ್ರವೇ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾಜಿ.ತಾ.ಪಂ ಸದಸ್ಯರಾದ ಗುರುದಾಸ್ ಭಂಡಾರಿ, ವಸಂತ್ ಪೂಜಾರಿ, ಕೋಡಿಬೆಟ್ಟು ಗ್ರಾ.ಪಂ ಸದಸ್ಯರಾದ ಸಂತೋಷ್ ಶೆಟ್ಟಿ, ಹಿರೇಬೆಟ್ಟು ಗ್ರಾ.ಪಂ ಮಾಜಿ ಅಧ್ಯಕ್ಷರಾದ ಸುರೇಶ್ ನಾಯ್ಕ್, ಪಂ ಸದಸ್ಯರಾದ ಯತೀಶ್ ಶೆಟ್ಟಿ, ಸುಮ ಪೂಜಾರಿ, ಮಾರಪ್ಪ ಮಡಿವಾಳ, ಕವಿತಾ, ಸತ್ಯಾನಂದ ನಾಯಕ್ ಅಂಜಾರು ಉಪಸ್ಥಿತರಿದ್ದರು.

































