ವರದಿ : ಶ್ರೀದತ್ತ ಹೆಬ್ರಿ
ಹೆಬ್ರಿ : ಹೆಬ್ರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಪೋಳ್ಳಿಯ ನಿವಾಸಿ ತಿಮ್ಮಪ್ಪಾಚಾರ್ಯ ಮನೆಯಲ್ಲಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು ನಡೆದಾಡಲೂ ಆಗುತ್ತಿರಲಿಲ್ಲ. ಇವರನ್ನು ಆಸ್ಪತ್ರೆಗೆ ದಾಖಲು ಮಾಡಲು ಆಗದೇ ಮನೆಯವರು ಕಷ್ಟಪಡುತ್ತಿದ್ದರು. ಇವರ ಮನೆಗೆ ಬರಲು ಯಾವುದೇ ರಸ್ತೆ ಸಂಪರ್ಕ ಇಲ್ಲ. ಆ ಪ್ರದೇಶದಲ್ಲಿ ಇವರದ್ದೇ ಒಂದೇ ಒಂಟಿ ಮನೆ. ಸುತ್ತಮುತ್ತಲಿನ ಜಾಗ ಬೇರೆಯವರ ಪಟ್ಟ ಸ್ಥಳವಾಗಿದ್ದು ಹಾಗೂ ಡೀಮ್ಡ್ ಫಾರೆಸ್ಟ್ ಆಗಿದ್ದರಿಂದ ರಸ್ತೆ ನಿರ್ಮಾಣ ಮಾಡಲು ಇದರಿಂದ ತೊಡಕಾಗಿದೆ.
ಕೂಡಲೇ ವಿಷಯ ತಿಳಿದ ಹೆಬ್ರಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗಣೇಶ್ ಕುಮಾರ್ ಮತ್ತು ಅವರ ತಂಡ ರವಿವಾರ ಅವರ ಮನೆಗೆ ತೆರಳಿ ಅನಾರೋಗ್ಯದಿಂದ ಬಳಲುತ್ತಿದ್ದ ತಿಮ್ಮಪ್ಪಾಚಾರ್ಯ ಅವರನ್ನು ಸುಮಾರು 2 ಕಿಲೋಮೀಟರ್ ಹೆಗಲ ಮೇಲೆ ಹೊತ್ತು ನಂತರ ವಾಹನದ ಮೂಲಕ ಹೆಬ್ರಿ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಅಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ಕಾರ್ಕಳ ಆಸ್ಪತ್ರೆಗೆ ದಾಖಲಿಸಲಾಯ್ತು. ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗಣೇಶ್ ಕುಮಾರ್ ಮತ್ತು ಯುವಕರ ಸಮಯಪ್ರಜ್ಞೆಗೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಯ ಸುರಿಮಳೆ ಸಿಕ್ಕಿದೆ. ತಂಡದಲ್ಲಿ ಹೆಬ್ರಿಯ ಬಿಜೆಪಿ ಪಕ್ಷದ ಪ್ರಮುಖರಾದ ಶೇಖರ ತಾಣ, ವಿಶ್ವನಾಥ್ ಹೆಗ್ಡೆ, ಪ್ರತ್ಯಕ್ಷ ಹೆಗ್ಡೆ, ದಿನೇಶ್ ಪೂಜಾರಿ, ಸಚಿನ್ ಗುಳಿಬೆಟ್ಟು, ಅಭಿಷೇಕ್ ತಾಣ, ಶ್ರೇಯಸ್ ಎಸ್. ಉಪಸ್ಥಿತರಿದ್ದರು.
