ರಾಜೇಶ್ ಭಟ್ ಪಣಿಯಾಡಿ
ಶೈಲಪುತ್ರಿ ನಮಸ್ತುಭ್ಯಂ
ವರದೇ ಕಾಮರೂಪಿಣಿ ಆರೋಗ್ಯದಾಯಿನೀ ದೇವಿ
ಹೈಮಾವತೀ ಮಾತಾ ನ ಮೋಸ್ತುತೇ
ಪಿತೃಗಳಿಗೆ ಪ್ರಿಯವಾದ 15 ದಿನಗಳ ಪಿತೃಪಕ್ಷ ಮಹಾಲಯ ಅಮಾವಾಸ್ಯೆ ಕಳೆದು ಶರನ್ನವರಾತ್ರಿಯ ಪುಣ್ಯಕಾಲ ಇಂದು ಪ್ರಾರಂಭವಾಗಿದೆ. ಮಾತೆದುರ್ಗೆ ಯ ಪರ್ವ ಕಾಲ ಇದು. ನವರಾತ್ರಿಯ ಮೊದಲ ದಿನವಾದ ಇಂದು ದುರ್ಗೆಯ ಪ್ರಥಮ ರೂಪ ಶೈಲಪುತ್ರಿಯನ್ನು ಪೂಜಿಸಲಾಗುತ್ತದೆ. ವೃಷಭ ವಾಹನಿಯಾದ ಆಕೆಯ ಒಂದು ಕೈಯಲ್ಲಿ ತ್ರಿಶೂಲ ಹಾಗೂ ಇನ್ನೊಂದು ಕೈಯಲ್ಲಿ ಕಮಲವನ್ನು ಹಿಡಿದಿದ್ದಾಳೆ. ದಕ್ಷ ಯಜ್ಞದ ಸಂದರ್ಭದಲ್ಲಿ ತಂದೆ ದಕ್ಷ ಪ್ರಜಾಪತಿಯಿಂದ ತನ್ನ ಪತಿಯ ನಿಂದನೆಯನ್ನು ಸಹಿಸಲಾಗದೆ ಯೋಗಾಗ್ನಿಯಲ್ಲಿ ಭಸ್ಮೀಭೂತಳಾಗಿ ಪರ್ವತರಾಜನ ಮಗಳಾಗಿ ಹುಟ್ಟಿದ ಪಾರ್ವತಿ ದೇವಿ ನವರಾತ್ರಿಯ ಪ್ರಥಮ ದಿನದಂದು ಶೈಲಪುತ್ರಿಯಾಗಿ ಆರಾಧಿಸಲ್ಪಡುತ್ತಾಳೆ. ಇನ್ನೊಂದು ಕಥೆಯ ಪ್ರಕಾರ ರಾಕ್ಷಸಾ ಗ್ರೇಸರ ಮಹಿಷಾಸುರನನ್ನು ವಧಿಸಲು ನವರೂಪಗಳನ್ನು ಹೊಂದಿ ಅವನನ್ನು ಸಂಹಾರ ಮಾಡುತ್ತಾಳೆ. ಈ ನವದುರ್ಗೆಯರಿಗೂ ಈ ನವರಾತ್ರಿಗೂ ನಯನ ರಂಜಿತ ವರ್ಣಗಳಿಗೂ ಅದೇನೋ ಸಂಬಂಧವಿದೆ. ಅದೇ ರೀತಿ ಈ ಬಣ್ಣಗಳಿಗೂ ವಾರದ ದಿನಗಳಿಗೂ ಸಂಬಂಧವಿದೆ. ನವರಾತ್ರಿಯ ಮೊದಲ ದಿನ ಶೈಲಪುತ್ರಿಯನ್ನು ಬೂದು ವರ್ಣದ ಸೀರೆಯಿಂದ ಅಲಂಕರಿಸಲಾಗುತ್ತದೆ. ಇನ್ನು ಕೆಲವರ ಪ್ರಕಾರ ಹಳದಿ ಬಣ್ಣದ ಹೂವು ಸೀರೆಗಳು ಆಕೆಗೆ ಪ್ರಿಯ ಎನ್ನುತ್ತಾರೆ. ಆದರೆ ಇಂದು ಗುರುವಾರವೂ ಆಗಿರುವುದರಿಂದ ಈ ದಿನ ಹಳದಿ ಬಣ್ಣಕ್ಕೆ ಬಹಳ ಪ್ರಾಮುಖ್ಯತೆ ಇದೆ. ಈ ಹಳದಿ ಬಣ್ಣಕ್ಕೆ ಒಂದು ಆಕರ್ಷಣ ಶಕ್ತಿ ಇದೆ. ಗುರುಗ್ರಹಕ್ಕೆ ಇದನ್ನು ಹೋಲಿಸ್ತಾರೆ. ಈ ಹಳದಿ ಬಣ್ಣ ನಕಾರಾತ್ಮಕ ಯೋಚನೆಗಳನ್ನು ದೂರ ಮಾಡಿ ಮನಸ್ಸು ವಿಚಲಿತಗೊಳ್ಳದಂತೆ ಕಾಪಾಡುತ್ತದೆ. ರಕ್ತಪರಿಚಲನೆ ಹಾಗೂ ಕಣ್ಣಿನ ದೃಷ್ಟಿ ದೋಷವನ್ನು ದೂರೀಕರಿಸುವ ಹಾಗೂ ಕಾಂತಿ ಹೆಚ್ಚಿಸುವ ಶಕ್ತಿ ಇದಕ್ಕಿದೆ. ಮತ್ತು ಇದು ಹೆಂಗಳೆಯರ ಸೌಭಾಗ್ಯದ ಸಂಕೇತ. ಪೀತ ವಸ್ತ್ರ ವಿಷ್ಣುವಿಗೂ ಪ್ರಿಯವಂತೆ. ಹಾಗಾಗಿ ಈ ಎಲ್ಲ ಕಾರಣದಿಂದ ವರ್ಣಗಳ ಮಹತ್ವ ದೇವಿಯ ಉಡುಗೆ ಅಲಂಕಾರದ ಮೂಲಕ ವ್ಯಕ್ತಗೊಳ್ಳುತ್ತದೆ. ಶೈಲಪುತ್ರಿ ದಾರಿದ್ರ್ಯನಾಶ ಮಾಡಿ ಆರೋಗ್ಯ ವೃದ್ಧಿ ನೀಡುವ ತಾಯಿ. ” ಹಿರಣ್ಯ ವರ್ಣ: ಸಹಿರಣ್ಯ ಸಂದ್ರಗ ಪಾನ್ನ ಪಾಸ್ಯೇ ದುಹಿರಣ್ಯವರ್ಣಃ
ಹಿರಣ್ಯಯಾತ್ಪರಿಯೋ ನೇ ರ್ನಿಶದ್ಯಾ ಹಿರಣ್ಯದಾದಾ ದತ್ಯನ್ನ ಮಸ್ಮಯ್ ” ಎಂದು ಶ್ರೀ ಸೂಕ್ತದಲ್ಲಿ ಮಾತೆಯನ್ನು ಸ್ಮರಿಸುವ ಪದಗಳು ವ್ಯಕ್ತವಾಗಿದೆ. ಹಿರಣ್ಯ ವರ್ಣದ ಹಿರಣ್ಯಪುಷ್ಪ, ಹಿರಣ್ಯಾಭರಣಾಲಂಕೃತ ದಿವ್ಯ ಸೌಂದರ್ಯ ರತ್ನಾಕರಿ ಮಾತೆಯನ್ನು ಇಂದು ಸ್ಮರಿಸಿದರೆ ಅವಳಿಗೆ ಇಷ್ಟವಾದ ಕೆಲಸ, ಬಟ್ಟೆ ತೊಟ್ಟರೆ ಆಯುರ್ ಆರೋಗ್ಯವನ್ನು ಆಕೆ ಕರುಣಿಸುತ್ತಾಳಂತೆ. ಹಾಗಾಗಿ ಈಗ ಮಹಿಳೆಯರು ಮಕ್ಕಳು ಪುರುಷರೂ ಕೂಡ ದಿನಕ್ಕೆ ಸಂಬಂಧ ಪಟ್ಟ ಬಟ್ಟೆಹಾಕಿ ಸಂತಸ ಪಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಬಣ್ಣದ ಬಟ್ಟೆ ಧರಿಸಿ ಫೋಟೋ ತೆಗೆದುಕೊಳ್ಳುವುದು ಕಛೇರಿಗಳಲ್ಲಿ ಸಂಬ್ರಮ ಪಡುವುದು, ಸೆಲ್ ಫೀ ತೆಗೆದುಕೊಳ್ಳುವುದು, ವಾರ್ತಾ ಪತ್ರಿಕೆಗಳಿಗೆ ಕಳುಹಿಸುವುದು ಫೇಸ್ ಬುಕ್ ಗೆ ಅಪ್ ಲೋಡ್ ಮಾಡುವುದು ಜನರಿಗೆ ಅದೊಂದು ಕ್ರೇಜಿ ಆಗಿಬಿಟ್ಟಿದೆ. ಒಂದಷ್ಟು ಅದರಿಂದ ಖುಷಿಯೂ ಸಿಗುತ್ತದೆ. “ಓಂ ಹ್ರೀಂ ಶ್ರೀಂ ಶೈಲಪುತ್ರಿ ದುರ್ಗಾಯೈ ನಮಃ| ” ಎಂದು ಪಠಿಸಿದರೆ ಈ ದಿನ ಬಹಳ ಒಳ್ಳೆಯದು. ಒಟ್ಟಾರೆ ಈ ನವರಾತ್ರಿಯ ಮೊದಲ ದಿನದ ಅಧಿದೇವತೆ ಶೈಲಪುತ್ರಿ ಎಲ್ಲರಿಗೂ ಸನ್ಮಂಗಲವನ್ನು ಉಂಟುಮಾಡಲಿ.


































