ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ: ಪ್ರಸ್ತುತ ಕಾಲಘಟ್ಟದಲ್ಲಿ ಸಮಾಜದಲ್ಲಿ ಸಹನೆ ಬಹಳ ಮುಖ್ಯವಾಗಿದ್ದು, ಅದರಲ್ಲೂ ದೈಹಿಕ ಹಾಗೂ ಮಾನಸಿಕ ಸಹನೆ ಅತೀ ಅಗತ್ಯವಾಗಿ ಬೇಕಾಗಿದೆ. ಕೋವಿಡ್‌ನಂತಹ ಕಠಿಣ ಪರಿಸ್ಥಿತಿಯನ್ನು ಗೆಲ್ಲಲು ಈ ಎರಡೂ ಸಹನೆಗಳು ಸಹಕಾರಿಯಾಗಿದೆ. ಇದಕ್ಕೆ ಸಹನಾ ಸಂಸ್ಥೆಯುವರು ಹೊಸದಾಗಿ ಆರಂಭಿಸಿದ ಸಹನಾ ಅಕ್ವೇಟಿಕ್ ಮತ್ತು ಸ್ಪೋರ್ಟ್ಸ್ ಕ್ಲಬ್ ಬಹಳಷ್ಟು ಪ್ರಯೋಜನವಾಗಲಿದೆ ಎಂದು ಅಯೋಧ್ಯೆ ಶ್ರೀ ರಾಮ ಜನ್ಮಭೂಮಿ ಪ್ರತಿಷ್ಠಾನದ ಟ್ರಸ್ಟಿ, ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.
ಶನಿವಾರ ಕೋಟೇಶ್ವರ – ಅಂಕದ ಕಟ್ಟೆಯಲ್ಲಿರುವ ಸಹನಾ ಸಮೂಹ ಸಂಸ್ಥೆಯ ವತಿಯಿಂದ ನೂತನವಾಗಿ ವಿನೂತನ ರೀತಿಯಲ್ಲಿ ಆರಂಭಿಸಲಾದ ಸಹನಾ ಅಕ್ವೇಟಿಕ್ ಮತ್ತು ಸ್ಪೋರ್ಟ್ಸ್ ಕ್ಲಬ್ ಅನ್ನು ಲೋಕಾರ್ಪಣೆಗೊಳಿಸಿ ಅವರು ಆಶೀರ್ವಚಿಸಿದರು.
ಈ ಸಂದರ್ಭ ಮಾಜಿ ಮುಖ್ಯಮಂತ್ರಿ ಡಾ| ಎಂ. ವೀರಪ್ಪ ಮೊಯಿಲಿ ಮಾತನಾಡಿ, ಸಹನೆ, ಕ್ಷಮತೆಯಿಂದ ಎಲ್ಲರ ಬದುಕಿನಲ್ಲೂ ಯಶಸ್ಸು ತಂದುಕೊಡುತ್ತದೆ. ವಾಣಿಜ್ಯ ಉದ್ದೇಶವಲ್ಲ, ಇಲ್ಲಿನ ಯುವಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆರಂಭಿಸಿರುವ ಈ ಅಕ್ವೇಟಿಕ್ ಮತ್ತು ಸ್ಪೋರ್ಟ್ಸ್ ಕ್ಲಬ್ ಯಶಸ್ವಿಯಾಗಲಿ ಎಂದರು.
ಮಾಜಿ ಮುಖ್ಯಮಂತ್ರಿ ಡಾ| ಎಂ. ವೀರಪ್ಪ ಮೊಯಿಲಿ ಹಾಗೂ ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇಗುಲದ ಆಡಳಿತ ಮೊಕ್ತೇಸರ ಬಿ.ಅಪ್ಪಣ್ಣ ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು.
ಇದೇ ವೇಳೆ ನೂತನವಾಗಿ ನಿರ್ಮಿಸಿರುವ ಕ್ಲಬ್ ಕಟ್ಟಡ, ಈಜುಕೊಳ, ಶಟ್ಲ್ ಬ್ಯಾಡ್‌ಮಿಟನ್, ಒಳಕ್ರೀಡಾಂಗಣ, ಜಿಮ್, ಬಾಕ್ಸ್ ಕ್ರಿಕೆಟ್ ಹಾಗೂ ಫುಟ್‌ಬಾಲ್ ಕ್ರೀಡಾಂಗಣವನ್ನು ಉದ್ಘಾಟಿಸಲಾಯಿತು.
ರಾಜ್ಯ ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಯುವಜನ ಸೇವೆ ಮತ್ತು ಕ್ರೀಡಾಧಿಕಾರಿ ಡಾ. ರೋಶನ್‌ಕುಮಾರ್ ಶೆಟ್ಟಿ, ನ್ಯೂ ಮೆಡಿಕಲ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ರಂಜನ್ ಶೆಟ್ಟಿ, ಎಡ್ವರ್ಡ್ ಮೆಮೋರಿಯಲ್ ಕ್ಲಬ್ ಅಧ್ಯಕ್ಷ ನಾಗರಾಜ್ ರಾವ್, ಸಹನಾ ಸಮೂಹ ಸಂಸ್ಥೆಯ ಸಹನಾ ಸುರೇಂದ್ರ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.
ಸಹನಾ ಸಮೂಹ ಸಂಸ್ಥೆಯ ಸುರೇಂದ್ರ ಶೆಟ್ಟಿ ಪ್ರಸ್ತಾವಿಸಿ, ಸ್ವಾಗತಿಸಿದರು. ಪತ್ರಕರ್ತ ಕೆ.ಸಿ. ರಾಜೇಶ್ ಕಾರ್‍ಯಕ್ರಮ ನಿರೂಪಿಸಿದರು.

