ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ : ಖಾಸಗಿ ಹೋಟೆಲ್ ಒಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಯುವಕ ಇತ್ತೀಚೆಗೆ ಅನುಮಾನಾಸ್ಪದವಾಗಿ ಮೃತರಾಗಿದ್ದ ಬಸ್ರಿಬೇರು ಕೇರಿಜೆಡ್ಡು ಲಚ್ಚು ನಾಯ್ಕ್ ಅವರ ಪುತ್ರ ಪ್ರಶಾಂತ ಅವರ ಆತ್ಮಹತ್ಯೆ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸುವಂತೆ ಆಗ್ರಹಿಸಿ ಬೈಂದೂರು ವಲಯ ಮರಾಠಿ ಸಮಾಜ ಸುಧಾರಕ ಸಂಘದ ವತಿಯಿಂದ ಡಿವೈಎಸ್ಪಿ ಶ್ರೀಕಾತ ಕೆ ಅವರಿಗೆ ಮನವಿ ಸಲ್ಲಿಸಲಾಯಿತು.
ನಗರದ ಹೋಟೇಲ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದ ಪ್ರಶಾಂತ ತಾಯಿಗೆ ದೂರವಾಣಿ ಕರೆ ಮಾಡಿ, ಸಹೋದರನ ಖಾತೆಗೆ 5,000 ರೂ. ಹಾಕಿರುವುದಾಗಿ ಹೇಳಿದ್ದಲ್ಲದೆ, ತುಳಸಿ ಪೂಜೆಗೆ ಮನೆಗೆ ಬರುವುದಾಗಿ ತಿಳಿಸಿದ್ದರು. ಅದರ ನಂತರದಲ್ಲಿ ನಡೆದ ಬೆಳವಣಿಗೆಗಳು ಸಂಶಯಾಸ್ಪದವಾಗಿರುವುದರಿಂದ ಹಾಗೂ ಆತನ ಸಾವಿನ ನಂತರ ಹೋಟೆಲ್ ಮಾಲಿಕ ವರ್ಗ ದುರಂತ ಘಟಿಸಿದ ಸ್ಥಳಕ್ಕೆ ಬಂದು ಹೋಗಿರುವುದು ಬಿಟ್ಟರೆ, ಮರಣೋತ್ತರ ಶವ ಪರೀಕ್ಷೆ ನಡೆಯುವ ಸ್ಥಳಕ್ಕೆ ಹಾಗೂ ಅವರ ಮನೆಗೆ ಬಾರದೆ ಇರುವುದು ಹಾಗೂ ಕುಟುಂಬಿಕರಿಗೆ ಸಾಂತ್ವನ ಹೇಳದೆ ಇರುವುದು ಸಂಶಯಗಳನ್ನು ಮೂಡಿಸುತ್ತಿದ್ದು, ಈ ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಆಗ್ರಹಿಸಿದರು.


ಬೈಂದೂರು ವಲಯ ಮರಾಠಿ ಸಮಾಜ ಸುಧಾರಕ ಸಂಘದ ಅಧ್ಯಕ್ಷ ಬೋಜು ನಾಯ್ಕ್, ಕುಂದಾಪುರ ಲ್ಯಾಂಪ್ ಸೊಸೈಟಿ ಅಧ್ಯಕ್ಷ ಸಂತೋಷ ನಾಯ್ಕ್ ಮೂದೂರು, ಸಿದ್ದೇಶ್ವರ ಮರಾಠಿ ಕ್ರೆಡಿಟ್ ಕೊ-ಅಪರೇಟವ್ ಸೊಸೈಟಿ ಜಡ್ಕಲ್ ನ ಅಧ್ಯಕ್ಷ ಮಹಾಲಿಂಗ ನಾಯ್ಕ್ , ಜಯರಾಮ್ ನಾಯ್ಕ್ ಯಡಮೊಗೆ, ಚಂದ್ರ ನಾಯ್ಕ್ ಬೀಸಿನಪಾರೆ, ಶೇಷು ನಾಯ್ಕ್ ಶಂಕರನಾರಾಯಣ, ಚಂದ್ರಮೋಹನ್ ಸೈಕೋಡು, ದಿನೇಶ್ ನಾಯ್ಕ್ ಕೆರಾಡಿ ಇದ್ದರು.