ವರದಿ : ದಿನೇಶ್ ರಾಯಪ್ಪನಮಠ
ಬೈಂದೂರು : ಪ್ರಧಾನಿ ನರೇಂದ್ರ ಮೋದಿಜಿಯವರ ಪರಿಕಲ್ಪನೆಯ ಸ್ಮಾರ್ಟ್ ಸಿಟಿಯ ಜೊತೆ ಸ್ಮಾರ್ಟ್ ವಿಲೇಜ್ ಗೂ ಆದ್ಯತೆ ನೀಡಿ ಗ್ರಾಮ ಸಡಕ್ ಯೋಜನೆಯ ಮೂಲಕ ಬೈಂದೂರು ವಿಧಾನ ಸಭಾ ಕ್ಷೇತ್ರದ ಒಟ್ಟು 25.9 ಕೀ.ಮೀ ರಸ್ತೆಯನ್ನು ರೂ 21.75 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ರಾಜ್ಯ ಸರಕಾರದಿಂದ ಗ್ರಾಮೀಣ ರಸ್ತೆಗಳ ಅಭಿವೃದ್ದಿಗೆ ರೂ 32.20 ಕೋಟಿ ವೆಚ್ಚದಲ್ಲಿ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ.ರೂ 10 ಕೋಟಿ ವೆಚ್ಚದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಜನಗಳು ವಾಸಿಸುವ ಪ್ರದೇಶಗಳ ರಸ್ತೆ ಅಭಿವೃದ್ದಿಗೆ ಅನುದಾನ ಮಂಜೂರಾಗಿದ್ದು ಶೀಘ್ರ ಕಾಮಗಾರಿ ಆರಂಭವಾಗಲಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ.
ಬೈಂದೂರ ವಿಧಾನಸಭಾ ಕ್ಷೇತ್ರದ ಜನತೆಯ ನಾಡಿಮಿಡಿತ ಅರಿತಿರುವ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಜಲಜೀವನ್ ಮಿಷನ್-ಮನೆಮನೆ ಗಂಗಾ ಯೋಜನೆಯಡಿ ರೂ 560 ಕೋಟಿ ವೆಚ್ಚದಲ್ಲಿ ಕ್ಷೇತ್ರದ ಪ್ರತಿ ಮನೆಗೂ ಶುದ್ದ ಕುಡಿಯುವ ನೀರನ್ನು ಒದಗಿಸುವ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಿದ್ದರು.ಮುಂದಿನ 50 ವರ್ಷದ ಜನಸಂಖ್ಯೆ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆ ರೂಪಿಸಲಾಗಿದೆ.ಪ್ರಸ್ತುತ ಈ ಕಾಮಗಾರಿಯ ಟೆಂಡರ್ ಕರೆಯಲಾಗಿದ್ದು ಅತೀ ಶೀಘ್ರದಲ್ಲಿ ಕಾಮಗಾರಿ ಪ್ರಾರಂಭಿಸಲಾಗುವುದು. ಬರುವಂಥ ದಿನಗಳಲ್ಲಿ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿಯವರ ಸಹಕಾರದೊಂದಿಗೆ ಬೈಂದೂರು ವಿಧಾನ ಸಭಾ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಅಭಿವೃದ್ದಿಪಡಿಸಲಾಗುವುದು ಎಂದು ತಿಳಿಸಿದ್ದಾರೆ.

ಕೋವಿಡ್-19ರ ಸಂಕಷ್ಟದ ಸಮಯದಲ್ಲಿ ಬಡವರ ಹಾಗೂ ಕಾರ್ಮಿಕರ ಸಹಾಯಕ್ಕೆ ನಿಂತ ಕೇಂದ್ರ ಹಾಗೂ ರಾಜ್ಯ ಸರಕಾರಗಳು :
ಬೈಂದೂರ ವಿಧಾನಸಭಾ ಕ್ಷೇತ್ರಾದ್ಯಂತ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ 11,435.35 ಕ್ವಿಂಟಲ್ ಪಡಿತರ ವಿತರಿಸಿದ್ದಾರೆ.
ನರೇಗಾ ಯೋಜನೆಯಡಿ ದುಡಿಯುವ ಕೈಗಳಿಗೆ ನೂರಾರು ದಿನಗಳ ಕೆಲಸ ನೀಡುವುದರೊಂದಿಗೆ ಕೂಲಿಯ ಹಣವನ್ನು ಸಹ ಹೆಚ್ಚಿಸಲಾಗಿದೆ. ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಲ್ಲಿ ವೈಯಕ್ತಿಕ ಇಂಗು ಗುಂಡಿ, ಶೌಚಾಲಯ, ಬಚ್ಚಲು ಗುಂಡಿ, ಕೃಷಿ ಬಾವಿ, ದನದ ಕೊಟ್ಟಿಗೆ ಮನೆ ಹಾಗೂ ಸಾರ್ವಜನಿಕವಾಗಿ ಕೆರೆ ಹೂಳೆತ್ತುವುದು, ಶಾಲೆ ಆವರಣ ಗೋಡೆ, ಗಿಡ ನೆಡುವುದು ಹೀಗೆ ಹಲವಾರು ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದೆ.
ನರೇಗಾ ಯೋಜನೆಯಲ್ಲಿ 2020-21ನೇ ಸಾಲಿನಲ್ಲಿ 1976 ಕಾಮಗಾರಿಗಳನ್ನು ರೂ 1174.73 ಲಕ್ಷದಲ್ಲಿ ಕಾಮಗಾರಿ ಮಾಡಲಾಗಿದ್ದು, ಪ್ರಸ್ತುತ 2021-22ನೇ ಸಾಲಿನಲ್ಲಿ 2862 ಕಾಮಗಾರಿಗಳನ್ನು ರೂ 2168.65 ಲಕ್ಷದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.ಕೋವಿಡ್ ಸಂಕಷ್ಟದ ಸಮಯದಲ್ಲಿ ದುಡಿಯುವ ಕೈಗಳಿಗೆ ನರೇಗಾದಲ್ಲಿ ಸಾಕಷ್ಟು ಕೆಲಸ ಸಿಕ್ಕಿದ್ದು ಜನರು ಗೂಳೆ ಹೋಗುವುದು ಕಡಿಮೆಯಾಗಿದೆ.

ಕಾರ್ಮಿಕಾ ಇಲಾಖೆ ವತಿಯಿಂದ ಬೈಂದೂರು ವಿಧಾನ ಸಭಾ ಕ್ಷೇತ್ರಾದ್ಯಂತ 7,000(ಏಳು ಸಾವಿರ) ಆಹಾರ ಸಾಮಗ್ರಿ ಕಿಟ್ ಗಳನ್ನು ನೀಡಲಾಗಿದೆ.
ಕಾರ್ಮಿಕ ಇಲಾಖೆ ವತಿಯಿಂದ ಬೈಂದೂರು ಹಾಗೂ ಕುಂದಾಪುರ ತಾಲೂಕಿಗೆ 12,250 ಸುರಕ್ಷಾ ಹಾಗೂ ಪ್ರತಿ ರಕ್ಷಣಾ ಕಿಟ್ ಗಳನ್ನು ನೀಡಲಾಗಿದೆ. ಮುಂದುವರಿದು ಬೈಂದೂರ ಹಾಗೂ ಕುಂದಾಪುರಕ್ಕೆ ಇನ್ನೂ 6,000 ಸುರಕ್ಷಾ ಕಿಟ್ ಗಳು ಬರಲಿವೆ ಎಂದು ಮಾಹಿತಿ ತಿಳಿಸಿದ್ದಾರೆ.
ಪ್ರಾಕೃತಿಕ ವಿಕೋಪ ಪರಿಹಾರ
ಪ್ರಾಕೃತಿಕ ವಿಕೋಪದಡಿ ಸಂಭವಿಸಿದ ಭತ್ತದ ಕೃಷಿ ಬೆಳೆ ಹಾನಿ ಹಾಗೂ ತೋಟಗಾರಿಕಾ ಬೆಳೆ ಹಾನಿ ,ಮಾನವ ಜೀವ ಹಾನಿ,ಜಾನುವಾರು ಜೀವ ಹಾನಿ,ಜಾನುವಾರು ಕೊಟ್ಟಿಗೆ ಹಾನಿ,ವಾಸ್ತವ್ಯದ ಮನೆ ಭಾಗಶ: ಹಾಗೂ ಸಂಪೂರ್ಣ ನಾಶಗಳಲ್ಲಿ ಒಟ್ಟು 816 ಪ್ರಕರಣಗಳಿಗೆ ರೂ 1,16,49,814/-(ಒಂದು ಕೋಟಿ ಹದಿನಾರು ಲಕ್ಷದ ನಲವತ್ತೊಂಬತ್ತು ಸಾವಿರದ ಎಂಟು ನೂರು ಹದಿನಾಲ್ಕು ರೂಪಾಯಿ)ಗಳನ್ನು ಪರಿಹಾರವಾಗಿ ಸಂತ್ರಸ್ಥರಿಗೆ ತ್ವರಿತವಾಗಿ ನೀಡಲಾಗಿದೆ.

ಕಸ್ತೂರಿ ರಂಗನ್ ವರದಿ ಜಾರಿಗೆ ವಿರೋಧ:
ಕಸ್ತೂರಿ ರಂಗನ್ ವರದಿ ಜಾರಿಯಾದರೆ ಬೈಂದೂರು ವಿಧಾನ ಸಭಾಕ್ಷೇತ್ರ ವ್ಯಾಪ್ತಿಯ ಹೊಸೂರು,ಬೈಂದೂರು,ಕೊಲ್ಲೂರು,ಯಳಜಿತ್,ತಗ್ಗರ್ಸೆ,ಮುದೂರು,ಗೋಳಿಹೊಳೆ,ಜಡ್ಕಲ್,ಹಳ್ಳಿಹೊಳೆ,ಆಲೂರು,ಚಿತ್ತೂರು,ಇಡೂರು ಕುಂಞಡಿ,ಕೆರಾಡಿ,ಬೆಳ್ಳಾಲ ಹಾಗೂ ವಂಡ್ಸೆ ಸೇರಿ 15 ಗ್ರಾಮಗಳ ಸಜನರಿಗೆ ತೀವ್ರ ತೊಂದರೆಗೊಳಗಾಗಲಿದ್ದಾರೆ.
ನಾನು ಒಬ್ಬ ಸಂಸದನಾಗಿ ಕ್ಷೇತ್ರದ ಜನತೆಯ ಸಮಸ್ಯೆ ಅರಿತು ಕಸ್ತೂರಿ ರಂಗನ್ ವರದಿಯನ್ನು ಜಾರಿ ಮಾಡದೆ ಸಂಪೂರ್ಣವಾಗಿ ತಿರಸ್ಕರಿಸಬೇಕು.ಸ್ಥಳೀಯ ಪರಿಸ್ಥಿತಿ ಅಧ್ಯಯನ ಮಾಡಲು ರಾಜ್ಯ ಹಾಗೂ ಕೇಂದ್ರ ಸರಕಾರದ ಅಧಿಕಾರಿಗಳನ್ನೊಳಗೊಂಡ ಕಾರ್ಯಪಡೆ ರಚಿಸಬೇಕು ಹಾಗೂ ವನ್ಯಜೀವ ವಲಯದ ಗಡಿಯಿಂದ 5 ರಿಂದ 10 ಕಿ.ಮೀ ಪರಿಸರ ಸೂಕ್ಷ್ಮ ವಲಯ(ESZ)ದ ಬಫರ್ ಜೋನ್ ಪರಿಮಿತಿಯನ್ನು ರದ್ದುಪಡಿಸಬೇಕು ಎಂದು ಕೇಂದ್ರ ಅರಣ್ಯ,ಪರಿಸರ ಹವಾಮಾನ ಬದಲಾವಣೆ ಸಚಿವರಾದ ಸನ್ಮಾನ್ಯ ಶ್ರೀ ಭೂಪೇಂದ್ರ ಯಾದವ್ ಅವರಿಗೆ ಮನವಿ ಸಲ್ಲಿಸದ್ದೇನೆ.
ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ಮತ ನೀಡಿ:

ಗ್ರಾಮ ಪಂಚಾಯತಿಯಲ್ಲಿ ಶೇಕಡ 50%ರಷ್ಷು ಮಹಿಳಾ ಮೀಸಲಾತಿ ನೀಡಿದ್ದು ಹಾಗೂ ಸದಸ್ಯರ ಗೌರವ ಧನ ಹೆಚ್ಚಳ ಮಾಡಿದ್ದು ನಮ್ಮ ಬಿಜೆಪಿ ಸರಕಾರ ಎಂದು ಹೇಳಿರುವ ಅವರು,
“ ಸತತವಾಗಿ ಕಳೆದ ಮೂರು ಬಾರಿ ದಕ್ಷಿಣ ಕನ್ನಡ ಮತ್ತು ಉಡುಪಿ ಪ್ರತಿನಿಧಿಸುವ ವಿಧಾನ ಪರಿಷತ್ ಸದಸ್ಯರಾಗಿದ್ದು, ಮುಜರಾಯಿ, ಬಂದರು ಮತ್ತು ಒಳನಾಡು ಜಲಸಾರಿಗೆ,ಮೀನುಗಾರಿಕೆ,ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗದ ಸಚಿವರಾಗಿ ಹಾಗೂ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾಗಿ ಸೇವೆ ಸಲ್ಲಿಸಿ ಪಂಚಾಯತ್ ರಾಜ್ ಬಗ್ಗೆ ಅಪಾರ ಅನುಭವವುಳ್ಳ ಹಾಗೂ ಸದನದಲ್ಲಿ ದೀನ ದಲಿತರ,ಬಡವರ, ಹಿಂದುಳಿದ ವರ್ಗದವರ, ಹಾಗೂ ಅಲ್ಪಸಂಖ್ಯಾತರ ಧ್ವನಿಯಾಗಿ ಸರ್ಮಥವಾಗಿ ಕಾರ್ಯನಿರ್ವಹಿಸಿದ ಹಿಂದುಳಿದ ವರ್ಗದ ನಾಯಕ, ದಕ್ಷ, ಪ್ರಾಮಾಣಿಕ, ಸರಳ ಸಜ್ಜನ, ಯಶಸ್ವಿ ನಾಯಕ ನಮ್ಮ ನಿಮ್ಮೆಲ್ಲರ ನೆಚ್ಚಿನ ಕೋಟಾ ಶ್ರೀನಿವಾಸ ಪೂಜಾರಿಯವರು ಇದೇ ಡಿಸೆಂಬರ್ 10ರಂದು ನಡೆಯುವ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ಈ ಬಾರಿಯೂ ಕೂಡ ನಿಮ್ಮ ಮೊದಲ ಪ್ರಾಶಸ್ತ್ಯದ ಮತವನ್ನು ನೀಡಿ ಎಂದು ಎಲ್ಲಾ ಚುನಾಯಿತ ಪ್ರತಿನಿಧಿಗಳಲ್ಲಿ ಮನವಿ ಮಾಡಿದ್ದಾರೆ.



































