ವರದಿ : ಶ್ರೀದತ್ತ ಹೆಬ್ರಿ
ಹೆಬ್ರಿ : ಕೊರೋನಾದ ಒಂದು ಹಾಗೂ ಎರಡನೇ ಅಲೆಯಲ್ಲಿ ಸಾಕಷ್ಟು ಜನರನ್ನು ಕಳೆದುಕೊಂಡಿದ್ದೇವೆ. ಸರಕಾರ ಅನೇಕ ಶ್ರೇಷ್ಠಮಟ್ಟದ ಸಂಶೋಧನೆ ನಡೆಸಿ 15 ರಿಂದ 18 ವರ್ಷದ ಮಕ್ಕಳಿಗೆ ಲಸಿಕೆಯನ್ನು ನೀಡುತ್ತಿರುವುದು ಅತ್ಯಂತ ಮಹತ್ವಪೂರ್ಣ ಜವಾಬ್ದಾರಿಯಾಗಿದ್ದು, ಹೆತ್ತವರು ಕ್ರಮವಹಿಸಿ ಮಕ್ಕಳಿಗೆ ಲಸಿಕೆಯನ್ನು ಹಾಕಿಸುವುದು ತಮ್ಮೆಲ್ಲರ ಜವಾಬ್ದಾರಿ ಎಂದು ಹೆಬ್ರಿ ತಹಶೀಲ್ದಾರ್ ಪುರಂದರ ಹೇಳಿದರು.
ಅವರು ಹೆಬ್ರಿಯ ಅಮೃತ ಭಾರತಿ ಕಾಲೇಜಿನಲ್ಲಿ 15 ರಿಂದ 18 ವರ್ಷದ ಮಕ್ಕಳ ನೀಡುವ ಲಸಿಕ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.


ಕಾರ್ಯಕ್ರಮದಲ್ಲಿ ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಸಂತೋಷ್ ಕುಮಾರ್ ಮಾತನಾಡಿ, ಸುರಕ್ಷಿತ ದೃಷ್ಟಿಯಿಂದ ಲಸಿಕೆಯನ್ನು ಪಡೆಯುವುದು ಮಕ್ಕಳ ಜವಾಬ್ದಾರಿಯಾಗಿದ್ದು, ಇದರಿಂದ ಯಾವುದೇ ಕೆಟ್ಟ ಪರಿಣಾಮಗಳು ಬೀರುವುದಿಲ್ಲ. ದೇಶಾದ್ಯಂತ ಲಸಿಕ ಅಭಿಯಾನಕ್ಕೆ ಭರಪೂರ ಆರಂಭ ಸಿಕ್ಕಿದ್ದು ಎಲ್ಲರೂ ಸದುಪಯೋಗಪಡಿಸಿಕೊಳ್ಳಿ ಎಂದರು.

ಹೆಬ್ರಿ ಗ್ರಾಪಂ ಅಧ್ಯಕ್ಷೆ ಮಾಲತಿ ಲಸಿಕಾ ಅಭಿಯಾನವನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಇಒ ಶಶಿಧರ್, ತಾಪಂ ನಿಕಟಪೂರ್ವ ಅಧ್ಯಕ್ಷ ರಮೇಶ್ ಪೂಜಾರಿ, ಉದ್ಯಮಿ ಸತೀಶ್ ಪೈ, ಅಮೃತ ಭಾರತಿ ಟ್ರಸ್ಟ್ ಆಡಳಿತ ಮಂಡಳಿ ಸದಸ್ಯರು, ಆರೋಗ್ಯ ಇಲಾಖೆ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ನೆರೆದಿದ್ದರು.


































