ಉಡುಪಿ: ಕೋವಿಡ್ ಮಾರ್ಗಸೂಚಿಗಳನ್ನು ಗ್ರಾಹಕರು ಪಾಲಿಸುವಂತೆ ಅಂಗಡಿ ಮುಂಗಟ್ಟುಗಳ ಮುಖ್ಯಸ್ಥರು ಎಚ್ಚರಿಸುವುದರೊಂದಿಗೆ ವ್ಯವಹರಿಸಬೇಕು ತಪ್ಪಿದಲ್ಲಿ ಅಂಗಡಿ ಮಾಲೀಕರಿಗೆ ದಂಡ ವಿಧಿಸಿ , ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಎಚ್ಚರಿಕೆಯನ್ನು ನೀಡಿದರು.
ಅವರು ಇಂದು ಮಣಿಪಾಲ್ ನ ಟೈಗರ್ ಸರ್ಕಲ್ , ಬಸ್ ಸ್ಟಾಂಡ್, ರಸ್ತೆ ಬದಿಯ ಅಂಗಡಿ ಮುಂಗಟ್ಟು ಸೇರಿದಂತೆ ಮಾಲ್ ಗಳಿಗೆ ಭೇಟಿ ನೀಡಿ , ಅಲ್ಲಿನ ವ್ಯಾಪಾರಿಗಳಿಗೆ ಕೋವಿಡ್ ಮಾರ್ಗಸೂಚಿಗಳನ್ನು ಚಾಚೂ ತಪ್ಪದೇ ಪಾಲಿಸಬೇಕು ಎಂದು ಎಚ್ಚರಿಕೆ ನೀಡುವುದರ ಜೊತೆಗೆ , ಮಾಸ್ಕ್ ಧರಿಸದೇ ವ್ಯಾಪಾರ ವಹಿವಾಟು ಮಾಡುವವರಿಗೆ ದಂಢ ವಿಧಿಸಲು ನಗರಸಭಾ ಸಿಬ್ಬಂದಿ ವರ್ಗದವರಿಗೆ ಸೂಚನೆ ನೀಡಿದರು.

ಅಂಗಡಿ ಮಾಲೀಕರುಗಳು ತಮ್ಮ ಅಂಗಡಿ ಮುಂಭಾಗ ಗ್ರಾಹಕರು ಸಾಮಾಜಿಕ ಅಂತರ ಕಾಯ್ದಕೊಳ್ಳುವಂತೆ ಸೂಕ್ತ ಮಾರ್ಕಿಂಗ್ ಮಾಡುವುದರೊಂದಿಗೆ ಸಾರ್ವಜನಿಕರು ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ನಿಗಾ ವಹಿಸಬೇಕು , ಮಾಸ್ಕ್ ಗಳನ್ನು ಕಡ್ಡಾಯವಾಗಿ ಧರಿಸಿಬೇಕು ಎಂಬ ನಾಮಫಲಕಗಳನ್ನು ಅಳವಡಿಸಬೇಕು, ಒಂದೊಮ್ಮೆ ಕೋವಿಡ್ ಮಾರ್ಗಸೂಚಿ ಪಾಲಿಸಿದ್ದಿದ್ದಲ್ಲಿ ಅವರೊಂದಿಗೆ ವ್ಯವಹರಿಸಲು ಮುಂದಾಗಬಾರದು ಎಂದರು.
ಮಾಲ್ ಗಳ ಪ್ರವೇಶ ದ್ವಾರದ ಬಳಿ ಥರ್ಮಲ್ ಸ್ಕ್ಯಾನಿಂಗ್ ಮಾಡುವುದರ ಜೊತೆಗೆ ಪ್ರತಿಯೊಬ್ಬರೂ ಮಾಸ್ಕ್ ಧರಿಸಿದ್ದರೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಬೇಕು , ಮಾಲ್ ಒಳಗೆ ಜನದಟ್ಟಣೆಯಗದಂತೆ ಎಚ್ಚರ ವಹಿಸಿ ಶೇ. 50 ಕ್ಕಿಂತ ಕಡಿಮೆ ಜನಸಾಂದ್ರತೆ ಇರುವಂತೆ ಕ್ರಮ ವಹಿಸಬೇಕು. ಒಂದೊಮ್ಮೆ ಇವುಗಳನ್ನು ಉಲ್ಲಂಘಿಸಿದಲ್ಲಿ ಮಾಲ್ ಗಳನ್ನು ಮುಚ್ಚುವಂತೆ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಕ್ರಮ ವಹಿಸುವಂತೆ ಸೂಚನೆ ನೀಡಿದರು.

ಸಾರ್ವಜನಿಕ ಸ್ಥಳದಲ್ಲಿ ಪ್ರತಿಯೊಬ್ಬರೂ ಕೋವಿಡ್ ನ ಸರಳ ಮಾರ್ಗಸೂಚಿಗಳಾದ ಸಾಮಾಜಿಕ ಅಂತರ ಕಾಪಾಡುವುದು, ಮುಖಗವಸು ಧರಿಸುವುದು, ಸ್ವಚ್ಚತೆಗೆ ಆದ್ಯತೆ ನೀಡುವುದು ಸೇರಿದಂತೆ ಮತ್ತಿತರ ಮಾರ್ಗಸೂಚಿಗಳನ್ನು ತಪ್ಪದೆ ಪಾಲಿಸಬೇಕು, ತಪ್ಪಿದಲ್ಲಿ ಅಂತಹವರಿAದ ನಿರ್ದಾಕ್ಷಿಣ್ಯವಾಗಿ ದಂಡ ವಸೂಲಿ ಮಾಡಲಾಗುವುದು ಎಂದರು.
ಔಷಧ ವ್ಯಾಪಾರ ಮಳಿಗೆಯಲ್ಲಿ ಮಾಲೀಕರಿಂದ ಕೆಮ್ಮು ಶೀತ ಜ್ವರದ ಔಷಧಿಗಳನ್ನು ವಿತರಿಸುವ ಮಾಹಿತಿಯನ್ನು ಪಡೆದು ಮಾತನಾಡಿ, ಖರೀದಿಸಿದವರ ಮಾಹಿತಿಯ ಪ್ರತಿದಿನದ ವರದಿಗಳನ್ನು ಸೂಕ್ತ ಪ್ರಾಧಿಕಾರಕ್ಕೆ , ಹಿಂದಿನಂತೆ ಕಡ್ಡಾಯವಾಗಿ ನೀಡಬೇಕೆಂದು ಸೂಚನೆ ನೀಡಿದರು.
ಸ್ಥಳೀಯ ಸಂಸ್ಥೆಗಳ ಆಯುಕ್ತರು ,ಮುಖ್ಯಾಧಿಕಾರಿಗಳು ಪ್ರತಿನಿತ್ಯ ಸಾರ್ವಜನಿಕ ಸ್ಥಳಗಳಲ್ಲಿ ಕೋವಿಡ್ ಮಾರ್ಗಸೂಚಿಗಳು ಪಾಲನೆಯಾಗುತ್ತಿದೆಯೆ ಇಲ್ಲವೇ ಎಂಬ ಬಗ್ಗೆ ನಿಗಾವಹಿಸಬೇಕು ಎಂದು ಸೂಚನೆ ನೀಡಿದರು.
ಈ ಸಂದಭಧಲ್ಲಿ ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದವರಿಂದ 3500 ದಂಡ ಸಂಗ್ರಹಿಸಲಾಯಿತು.

ಈ ಸಂದರ್ಭದಲ್ಲಿ ನಗರಸಭೆ ಆಯುಕ್ತ ಉದಯ ಶೆಟ್ಟಿ , ನಗರಸಭೆಯ ಸಿಬ್ಬಂದಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

































