Connect with us

Hi, what are you looking for?

Diksoochi News

ರಾಜ್ಯ

ಹೊನ್ನಾವರ: ‌ಮಹಾಪ್ರಧಾನ‌ ಯೀಚಪ್ಪ ಒಡೆಯರ ಅಪ್ರಕಟಿತ ‌ಶಾಸನ‌ ಪತ್ತೆ

1

ಹೊನ್ನಾವರ: ಭಟ್ಕಳ ‌ತಾಲೂಕಿನ ಶಿರಾಲಿ‌ ಗ್ರಾಮದ ತಟ್ಟಿಹಕ್ಕಿಲಿನಲ್ಲಿರುವ ಮಣ್ ಹೊಂಡದ ಶ್ರೀ ಕೇಶವಮೂರ್ತಿ ದೇವಾಲಯದ ಆವರಣದಲ್ಲಿ ಅಪ್ರಕಟಿತ ಶಾಸನವೊಂದು ಪತ್ತೆಯಾಗಿದೆ.‌ ಈ ಶಾಸನವು ವಿಜಯನಗರದ‌ ದೊರೆಗಳಾದ ಇಮ್ಮಡಿ‌ ಹರಿಹರ ಮತ್ತು ಒಂದನೇ ದೇವರಾಯನ ಕಾಲದಲ್ಲಿ ಕೇಶವನಾಥ ದೇವರಿಗೆ ಬಿಟ್ಟ ದತ್ತಿ ವಿಷಯವನ್ನು ಪ್ರಸ್ತಾಪಿಸುತ್ತಿದೆ.

ಗ್ರಾನೈಟ್ (ಕಣ) ಶಿಲೆಯಲ್ಲಿ ಕೊರೆಯಲ್ಟಟ್ಟಿರುವ ಈ ಶಾಸನವು 3.5 ಅಡಿ ಎತ್ತರ ಹಾಗು 2.5 ಅಡಿ‌ ಅಗಲವಾಗಿದೆ‌‌. ಶಾಸನದಲ್ಲಿ ಒಟ್ಟು 37 ಸಾಲುಗಳಿದ್ದು ಕನ್ನಡ ಲಿಪಿ ಮತ್ತು ಭಾಷೆಯದ್ದಾಗಿದೆ. ಶಾಸನದ ಶಿರೋಭಾಗದಲ್ಲಿ ಶಿವಲಿಂಗಕ್ಕೆ ಪೂಜೆಗೈಯ್ಯುತ್ತಿರುವ ಯತಿ, ಕರುವಿಗೆ ಹಾಲುಣಿಸುತ್ತಿರುವ ಹಸು ಹಾಗೂ ನಂದಿಯ ಉಬ್ಬು ಕೆತ್ತೆನೆಯಿದೆ.
ಶಾಸನವು ಎರಡು ಕಾಲಘಟ್ಟದಲ್ಲಿ ದಾನ ನೀಡಿರುವ ವಿಷಯವನ್ನು ಉಲ್ಲೇಖಿಸುತ್ತದೆ.

ವಿಜಯನಗರದ ದೊರೆ ಒಂದನೇ ದೇವರಾಯನು‌ ಆಳ್ವಿಕೆ ಮಾಡುತ್ತಿರುವಾಗ ಹೊನ್ನಾವರದ ರಾಜಧಾನಿಯಲ್ಲಿದ್ದುಕೊಂಡು, ಹಯಿವೆ-ತುಳು-ಕೊಂಕಣ ಪ್ರದೇಶಗಳನ್ನು ಆಳ್ವಿಕೆ ಮಾಡುತ್ತಿದ್ದ ಮಹಾಪ್ರಧಾನ ಯೀಚಪ್ಪ ಒಡೆಯನು 1333 ನೆಯ ವಿಕೃತ ಸಂವತ್ಸರದ ಕಾರ್ತಿಕ ಶುದ್ಧ 1 ಶುಕ್ರವಾರ (ಕ್ರಿ.‌ಶ 1410 ನವೆಂಬರ್ 6 ಮಂಗಳವಾರ)ದಂದು ಮಂಡ್ಮಣದ ಕೇಶವನಾಥ ದೇವರಿಗೆ ಕೊಟ್ಟ ದತ್ತಿಯ ಕುರಿತು ಉಲ್ಲೇಖಿಸುತ್ತದೆ. ಹಾಗೆಯೇ ಶಕವರುಷ 1312 ನೆಯ ಶುಕ್ಲ ಸಂವತ್ಸರದ ಪಾಲ್ಗುಣ ಮಾಸ ಶು 13 ಆದಿತ್ಯವಾರ ( ಕ್ರಿ.ಶ 1390 ಮಾರ್ಚ್ 8 ಸೋಮವಾರ)ದಂದು ವಿಜಯನಗರದ ದೊರೆ ಇಮ್ಮಡಿ ಹರಿಹರ ಆಳ್ವಿಕೆ ಮಾಡುತ್ತಿರುವಾಗ ಹೊನ್ನಾವರದ ರಾಜಧಾನಿಯಿಂದ ಆಳ್ವಿಕೆ ಮಾಡುತ್ತಿದ್ದ ಮಹಾಪ್ರಧಾನ ಮಲ್ಲಪ್ಪ ಒಡೆಯನು ಬೆಂಗರೆಯ ತಟ್ಟಿಹಕ್ಕಲ ಕೇಶವನಾಥ ದೇವರ ಅಮೃತಪಡಿಯ ಧರ್ಮಕ್ಕೆ ಭೂಮಿಯನ್ನು ದತ್ತಿ ಬಿಟ್ಟುಕೊಟ್ಟಿರುವುದು ತಿಳಿದುಬರುತ್ತದೆ.

Advertisement. Scroll to continue reading.

ಈ ದತ್ತಿಯನ್ನು ಆ ಚಂದ್ರರ್ಕ ಸ್ಥಾಯಿಯಾಗಿ ಪಾಲಿಸಿಕೊಂಡು ಬರಬೇಕೆಂದು ಯೀಚಪ್ಪ ‌ಒಡೆಯರು ಶಾಸನವನ್ನು ಬರೆಯಿಸಿ ಮಂಡ್ಮಣ ಕೇಶವನಾಥ ದೇವಾಲಯದಲ್ಲಿ ಸ್ಥಾಪಿಸಿರುವ ವಿಷಯ ಶಿಲಾಶಾಸನದ ಮುಖ್ಯ ವಸ್ತುವಾಗಿದೆ.
ಶಾಸನದಲ್ಲಿ ಉಲ್ಲೇಖಿತ ಮಂಡ್ಮಣ ಪ್ರಸ್ತುತ ಮಣ್ ಹೊಂಡವಾಗಿರಬೇಕು, ಇನ್ನುಳಿದಂತೆ ಬೆಂಗ್ರೆ ಮತ್ತು ತಟ್ಟಿಹಕ್ಕಲು ಹೆಸರು ಯಥಾವತ್ತಾಗಿ ಇಂದಿಗೂ ಮುಂದುವರಿದಿದೆ ಎಂದು ಶಾಸನವನ್ನು ಓದಿ ಅರ್ಥೈಸಿಕೊಂಡ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಸ್ನಾತಕೋತ್ತರ ಇತಿಹಾಸ ಮತ್ತು ಪುರಾತತ್ವ ವಿಭಾಗದ ಮುಖ್ಯಸ್ಥರಾದ ಡಾ.‌ ಗಣಪತಿ ಗೌಡ ಮತ್ತು ಇತಿಹಾಸ ಮತ್ತು ಪುರಾತತ್ವ ‌ಸಂಶೋಧನಾರ್ಥಿ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ತಿಳಿಸಿದ್ದಾರೆ.


ಈ ಶಾಸನವನ್ನು ಸಂಶೋಧಿಸುವಲ್ಲಿ ಶ್ರೀ ಕೇಶವನಾಥ ದೇವಾಲಯದ ಅಧ್ಯಕ್ಷರಾದ ಆನಂದ ದೇವಾಡಿಗ, ಉತ್ಸವ ಸಮಿತಿಯ ಅಧ್ಯಕ್ಷರಾದ ರವಿ ದೇವಾಡಿಗ, ಸಮಿತಿಯ ಸದಸ್ಯರಾದ ವೆಂಕಟ್ರಮಣ ದೇವಾಡಿಗ, ಸುಬ್ರಾಯ ದೇವಾಡಿಗ, ರಾಮಕೃಷ್ಣ ದೇವಾಡಿಗ, ಜನಾರ್ದನ ದೇವಾಡಿಗ, ದೇವರಾಜ ದೇವಾಡಿಗ, ಮಂಜುನಾಥ ದೇವಾಡಿಗ ಮತ್ತು ಸಂಕರ್ಷಣ ಗುರುದತ್ತ ಶುಕ್ಲ ಮೊದಲಾದವರು ಸಹಕರಿಸಿದ್ದರು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

You May Also Like

ಕರಾವಳಿ

2 ಶಿರ್ವ : ಶಿರ್ವ ಸಂತ ಮೇರಿ ಪದವಿ ಪೂರ್ವ ಕಾಲೇಜಿನ ಮಹಿಳಾ ಸಂಘ ‘ಧಾರಿಣಿ’ಯ ಉದ್ಘಾಟನೆ ಇತ್ತೀಚೆಗೆ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಸರಿತಾ ಆಲ್ವ,  ಯಶಸ್ಸು ಎನ್ನುವುದು ರಾತ್ರೋ ರಾತ್ರಿ...

error: Content is protected !!