ಚಂದನವನ : ಬಹುನಿರೀಕ್ಷಿತ ಚಿತ್ರ ಜೇಮ್ಸ್ ನ ಟೀಸರ್ ಬಿಡುಗಡೆಯಾಗಿದೆ. ಟೀಸರ್ ನೋಡಿದ ಅಭಿಮಾನಿಗಳು ಫಿದಾ ಆಗಿದ್ದಾರೆ.
ಹೌದು, ಅಪ್ಪು ನಾಯಕನಾಗಿ ನಟಿಸಿದ ಕೊನೆಯ ಚಿತ್ರ ಜೇಮ್ಸ್ ನ ನಿಗದಿ ಪಡಿಸಿದಂತೆ ಇಂದು ಬಿಡುಗಡೆಯಾಗಿದೆ. ಅಪ್ಪು ಜೇಮ್ಸ್ ಪಾತ್ರದ ಪರಿಚಯ ಮಾಡಲಾಗಿದೆ. ಒಂದು ನಿಮಿಷ 27 ಸೆಕೆಂಡ್ ನ ಟೀಸರ್ ಇದಾಗಿದ್ದು, ಚಿತ್ರ ಡಾರ್ಕ್ ಮಾರ್ಕೆಟ್ ಕಥೆಯನ್ನೊಳಗೊಂಡಿದೆ ಎಂಬ ಸುಳಿವು ನೀಡಿದೆ.
ಭಾವನೆಗಳು ಬ್ಯುಸಿನೆಸ್ ಗಿಂತ ದೊಡ್ಡದು – ಜೇಮ್ಸ್ ಎಂಬ ಬರಹದೊಂದಿಗೆ ಟೀಸರ್ ಆರಂಭಗೊಳ್ಳುತ್ತದೆ. ‘ನನಗೆ ಮೊದ್ಲಿಂದಾನೂ ರೆಕಾರ್ಡ್ಸ್ ಬ್ರೇಕ್ ಮಾಡಿನೇ ಅಭ್ಯಾಸ’ ಎಂಬ ಪವರ್ ಫುಲ್ ಡೈಲಾಗ್ ಕೂಡ ಇದ್ದು, ಶಿವರಾಜ್ ಕುಮಾರ್ ಅಪ್ಪುಗೆ ದನಿಯಾಗಿದ್ದಾರೆ. ಟೀಸರ್ ನೋಡುತ್ತಿದ್ದಂತೆ ಇದೊಂದು ಪಕ್ಕಾ ಆ್ಯಕ್ಷನ್ ಥ್ರಿಲ್ಲರ್ ಎಂಬುದು ದೃಢವಾಗಿದೆ.

ಅಪ್ಪು ಹುಟ್ಟುಹಬ್ಬದಂದು ಚಿತ್ರ ಬಿಡುಗಡೆ :
ಜೇಮ್ಸ್ ಗೆ ಚೇತನ್ ಕುಮಾರ್ ನಿರ್ದೇಶನವಿದೆ. ಕಿಶೋರ್ ಪತ್ತಿಕೊಂಡ ಬಂಡವಾಳ ಹೂಡಿದ್ದಾರೆ. ಪ್ರಿಯಾ ಆನಂದ್ ನಾಯಕಿ. ಶರತ್ ಕುಮಾರ್, ರಂಗಾಯಣ ರಘು, ಸಾಧು ಕೋಕಿಲ, ಚಿಕ್ಕಣ್ಣ, ಸುಚೇಂದ್ರ ಪ್ರಸಾದ್ ಮೊದಲಾದವರು ಚಿತ್ರದಲ್ಲಿದ್ದಾರೆ.
ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಜೇಮ್ಸ್ ಬಿಡುಗಡೆ ಆಗಲಿದೆ. ಪುನೀತ್ ಹುಟ್ಟಿದ ದಿನವಾದ ಮಾರ್ಚ್ 17ರಂದು ಜೇಮ್ಸ್ ತೆರೆಗೆ ಬರಲಿದೆ.


































