ಶಿವಮೊಗ್ಗ: ದುಷ್ಕರ್ಮಿಗಳ ಅಟ್ಟಹಾಸಕ್ಕೆ ಮಲೆನಾಡು ಬೆಚ್ಚಿಬಿದ್ದಿದ್ದು, ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ನಗರದ ಸೀಗೆಹಟ್ಟಿ ನಿವಾಸಿ ಹರ್ಷ (24) ಕೊಲೆಗೀಡಾದ ಯುವಕ. ನಾಲ್ವರು ದುಷ್ಕರ್ಮಿಗಳು ಕಾರಿನಲ್ಲಿ ಬಂದು ಮಾರಕಾಸ್ತ್ರಗಳಿಂದ ಹಲ್ಲೆಗೈದು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಬಳಿಕ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಹರ್ಷ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಶಿವಮೊಗ್ಗದ ಸಿಗೇಹಟ್ಟಿ ಬಡಾವಣೆ ನಿವಾಸಿಯಾಗಿದ್ದ ಹರ್ಷ, ಐದು ವರ್ಷಗಳಿಂದ ಭಜರಂಗ ದಳದ ಸಕ್ರಿಯ ಕಾರ್ಯಕರ್ತನಾಗಿದ್ದ. ಈ ಹಿಂದೆ ಎರಡು ಬಾರಿ ಈತನ ಮೇಲೆ ಅಟ್ಯಾಕ್ ನಡೆದಿತ್ತು. ಆದರೆ ಭಾನುವಾರ ಸ್ಕೆಚ್ ಹಾಕಿದ್ದ ದುಷ್ಕರ್ಮಿಗಳು, ಹರ್ಷನ ಮೇಲೆ ಭೀಕರ ದಾಳಿ ಮಾಡಿದ್ದಾರೆ. ಕೆಲವೇ ಕ್ಷಣಗಳಲ್ಲಿ ಮಾರಕಾಸ್ತ್ರ ಬೀಸಿ ಪರಾರಿ ಆಗಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಸೀಗೆಹಟ್ಟಿ ಬಡಾವಣೆ ಮತ್ತು ಅಕ್ಕಪಕ್ಕದ ಬಡಾವಣೆ ನಿವಾಸಿಗಳು ಜಮಾಯಿಸಿದ್ದು, ಆಸ್ಪತ್ರೆಗೆ ಸೇರಿಸಲಾಯಿತಾದರೂ ಹರ್ಷ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ.

ಇನ್ನು ಹಲ್ಲೆ ನಡೆಯುತ್ತಿದ್ದಂತೆ ಎರಡು ಗುಂಪುಗಳ ನಡುವೆ ನಗರದಲ್ಲಿ ಕಲ್ಲು ತೂರಾಟ ನಡೆದಿದೆ. ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಈ ವೇಳೆ ನಗರದ ದೊಡ್ಡಪೇಟೆ ಪೊಲೀಸ್ ಠಾಣಾ ಪೊಲೀಸರು ಲಾಠಿ ಚಾರ್ಜ್ ಮಾಡಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ.
ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ 144 ಸೆಕ್ಷನ್ ಜಾರಿ ಮಾಡಲಾಗಿದ್ದು, ಇಂದು ನಗರದ ಶಾಲಾ ಡಿಸಿ ಡಾ. ಸೆಲ್ವಮಣಿ ರಜೆ ಘೋಷಿಸಿದ್ದಾರೆ. ಶಿವಮೊಗ್ಗ ಬೂದಿ ಮುಚ್ಚಿದ ಕೆಂಡದಂತಿದ್ದು, ಸದ್ಯ ನಗರಾದ್ಯಂತ ಪೊಲೀಸ್ ಕಣ್ಗಾವಲು ಇದೆ.
