ಶಿವಮೊಗ್ಗ: ಹರ್ಷ ಹತ್ಯೆ ಪ್ರಕರಣದ ನಂತರ ಶಿವಮೊಗ್ಗ ಬೂದಿ ಮುಚ್ಚಿದ ಕೆಂಡದಂತೆ ಇದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆಯನ್ನು ಫೆಬ್ರವರಿ 26ರವರೆಗೆ ವಿಸ್ತರಣೆ ಮಾಡಲಾಗಿದೆ.
ಈ ಬಗ್ಗೆ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆದೇಶ ಹೊರಡಿಸಿದ್ದಾರೆ.
ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಹಿತದೃಷ್ಠಿಯಿಂದ ಶಿವಮೊಗ್ಗ ನಗರ ವ್ಯಾಪ್ತಿಯೊಳಗೆ ಸಿಆರ್ ಪಿಸಿ ಕಲಂ 144 ರನ್ವಯ ಪ್ರತಿಬಂಧಕಾಜ್ಞೆಯನ್ನು ದಿನಾಂಕ 26-02-2022ರ ಬೆಳಿಗ್ಗೆ 9 ಗಂಟೆಯವರೆಗೆ ಜಾರಿಗೊಳಿಸಿರುವುದಾಗಿ ತಿಳಿಸಿದ್ದಾರೆ.

ನಿಷೇಧಾಜ್ಞೆಯ ಸಂದರ್ಭದಲ್ಲಿ ಐದಕ್ಕಿಂತ ಹೆಚ್ಚು ಜನರ ಗುಂಪು ಸೇರುವಂತಿಲ್ಲ.
ಯಾವುದೇ ಮೆರವಣಿಗೆ ಸಭೆ, ಸಮಾರಂಭಗಳು, ವಿಜಯೋತ್ಸವ, ಸಾರ್ವಜನಿಕ ಪ್ರತಿಭಟನಾ ಮೆರವಣಿಗೆ, ಜಾಥಾ, ಧರಣಿ, ಮುಷ್ಕರ, ರಸ್ತೆ ರೋಕೋ ನಡೆಸುವಂತಿಲ್ಲ.
ಅಲ್ಲದೇ ಎಲ್ಲಾ ವ್ಯಾಪಾರದ ಅಂಗಡಿ, ಮುಂಗಟ್ಟುಗಳನ್ನು ಮುಚ್ಚುವುದು
ಹಾಲು, ದಿನಸಿ ಮತ್ತು ತರಕಾರಿ ಖರೀದಿಗೆ ಬೆಳಿಗ್ಗೆ 6 ರಿಂದ 8 ಗಂಟೆಯವರೆಗೆ ಮಾತ್ರ ಅನುಮತಿ ಎಂದು ಆದೇಶದಲ್ಲಿ ತಿಳಿಸಲಾಗಿದೆ.

