ಕುಂದಾಪುರ : ಜನರು ಶೈಕ್ಷಣಿಕ, ಧಾರ್ಮಿಕ, ಆರ್ಥಿಕ ಪ್ರಗತಿ ಸಾಧಿಸುವ ಸದುದ್ದೇಶ ಗ್ರಾಮಾಭಿವೃದ್ದಿ ಯೋಜನೆಯದ್ದು. ಗ್ರಾಮಾಭಿವೃದ್ದಿ ಯೋಜನೆ ಮಹಿಳೆಯರ ಆರ್ಥಿಕ ಸ್ವಾಲಂಬನೆಯ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಿಸಿರುವುದು ಸಂತೋಷದ ವಿಚಾರವಾಗಿದೆ. ನಮ್ಮ ಮನಸ್ಸು ಸುಸ್ಥಿತಿಯಲ್ಲಿರಬೇಕು. ಆಗ ಸಮಾಜದ ಅಭಿವೃದ್ಧಿ ಕೂಡ ಸಾಧ್ಯ ಎಂದು ಬಸ್ರೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ.ಅಪ್ಪಣ್ಣ ಹೆಗ್ಡೆಯವರು ಕೊರ್ಗಿ ಶ್ರೀಮತಿ ಗಿರಿಜಾ ಚಂದ್ರಶೇಖರ ಹೆಗ್ಡೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊರ್ಗಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಕಾಳಾವರ ವಲಯದ ವಲಯ ಮಟ್ಟದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ಸಾಧನಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶ್ರೀ.ಕ್ಷೇ.ಧ. ಗ್ರಾ.ಯೋ ಕುಂದಾಪುರ ತಾಲೂಕಿನ ಹಿರಿಯ ಯೋಜನಾಧಿಕಾರಿ ಮುರುಳೀಧರ ಕೆ. ಶೆಟ್ಟಿ ಮಾತನಾಡಿ, ಕೊರೊನಾ ಕಾಲದಲ್ಲಿ ಕೂಡ ಗ್ರಾಮಾಭಿವೃದ್ದಿ ಯೋಜನೆಯ ಕಾರ್ಯಕ್ರಮಗಳು ಚಲನಶೀಲವಾಗಿತ್ತು. ಯೋಜನೆಯ ಸದಸ್ಯರು ಗ್ರಾಮಾಭಿವೃದ್ದಿ ಯೋಜನೆಯ ಮೂಲಕ ಸಿಗುವ ಎಲ್ಲ ಸೌಲಭ್ಯಗಳು ಸದುಪಯೋಗಪಡಿಸಿ ಕೊಳ್ಳಬೇಕು ,ಆಗ ಮಾತ್ರ ಸ್ವಸಹಾಯ ಸಂಘದ ಸದಸ್ಯರು ಆರ್ಥಿಕ ಸ್ವಾವಲಂಬನೆ ಸಾಧಿಸಲು ಸಾಧ್ಯ ಎಂದರು.
ವಿಶೇಷ ಧಾರ್ಮಿಕ ಉಪನ್ಯಾಸ ನೀಡಿರುವ ಬ್ರಹ್ಮಾವರ ಪಿ.ಯು ಕಾಲೇಜಿನ ಕನ್ನಡ ಉಪನ್ಯಾಸಕ ಅಲ್ತಾರು ನಾಗರಾಜ್ ಮಾತನಾಡಿ, ಒಳ್ಳೆಯದ್ದು , ಕೆಟ್ಟದ್ದು ಮನುಷ್ಯ ಸಹಜ ಗುಣ. ಕೆಟ್ಟತನವನ್ನು ಹೋಗಲಾಡಿಸಲು ಮನೆ – ಮನೆಗಳಲ್ಲಿಯೂ ಭಜನೆಯ ಮುಖೇನ ಧಾರ್ಮಿಕತೆಯ ಮನೋಭಾವ ಬೆಳೆಯಬೇಕಿದೆ. ಧಾರ್ಮಿಕ ಚಿಂತನೆಗಳು, ಧ್ಯಾನಗಳು ನಮಗೆ ಹುಮ್ಮಸ್ಸು ನೀಡುತ್ತದೆ. ಸದಾ ಒಳ್ಳೆಯ ಮಾತುಗಳು , ಒಳಿತನ್ನು ಯೋಚಿಸುವ ಮನೋಭಾವ ನಮ್ಮದಾಗಿರಲಿ” ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊರ್ಗಿ ಒಕ್ಕೂಟದ ಅಧ್ಯಕ್ಷೆ ಪುಷ್ಪಾ ಭಂಡಾರಿ ವಹಿಸಿದ್ದರು.
ಇದೇ ವೇಳೆಯಲ್ಲಿ ಗ್ರಾಮಾಭಿವೃದ್ದಿ ಯೋಜನೆಯ ಮಹತ್ವಾಕಾಂಕ್ಷಿ ಯೋಜನೆಗಳಾದ ಸೆಲ್ಕೊ ಸೋಲಾರ್, ಕುಕ್ ಸ್ಟವ್, ಮೈಕ್ರೋ ಬಚತ್, ಈ ಶ್ರಮ ಕಾರ್ಡ್ ಸೌಲಭ್ಯವನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಲಾಯಿತು.

ವಲಯಮಟ್ಟದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಸಾಧನೆ ಮಾಡಿರುವ ವಲಯದ ಸೇವಾಪ್ರತಿನಿಧಿಯವರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಾಳಾವರ ಗ್ರಾ.ಪಂ ಮಾಜಿ ಅಧ್ಯಕ್ಷ ರೋ.ರಂಜಿತ್ ಕುಮಾರ್ ಶೆಟ್ಟಿ, ಗಿರಿಜಾ ಚಂದ್ರಶೇಖರ್ ಹೆಗ್ಡೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯ ಜಯಕರ ಹೆಗ್ಡೆ, ಸತ್ಯನಾರಾಯಣ ಪೂಜೆಯ ಧಾರ್ಮಿಕ ವಿಧಿ ವಿಧಾನದ ನೇತೃತ್ವ ವಹಿಸಿದ್ದ ಮಂಜುನಾಥ್ ಕಲ್ಕೂರ್ , ಹೆಸ್ಕುತ್ತೂರು ಒಕ್ಕೂಟದ ಅಧ್ಯಕ್ಷ ಅಶೋಕ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಕಾಳಾವರ ವಲಯದ ಮೇಲ್ವಿಚಾರಕ ದೀಪಕ್ ಕುಮಾರ್ ವಲಯದ ಸಾಧನಾ ವರದಿ ಮಂಡಿಸಿದರು. ರಾಜು ಕುಲಾಲ್ ಸ್ವಾಗತಿಸಿ, ತಾಲೂಕಿನ ಕೃಷಿ ಅಧಿಕಾರಿ ಚೇತನ್ ಕುಮಾರ್ ವಂದಿಸಿದರು.
ನವ್ಯಶ್ರೀ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.



































