ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಪಂಚಾಯತ್ ರಾಜ್ ವ್ಯವಸ್ಥೆಯನ್ನು ಗ್ರಾಮದಲ್ಲಿ ಸಮರ್ಪಕವಾಗಿ ಅನುಷ್ಠಾನ ಮಾಡಿದ ಹಿನ್ನೆಲೆಯಲ್ಲಿ 3 ಬಾರಿ ಮಹಾತ್ಮಾಗಾಂಧಿ ಗ್ರಾಮ ಪುರಸ್ಕಾರ ಪಡೆದ ಬಾರಕೂರು ಹನೆಹಳ್ಳಿ ಗ್ರಾಮ ಪಂಚಾಯತಿ ಗ್ರಾಮ ಸಭೆ ಶನಿವಾರ ಗ್ರಾಮ ಪಂಚಾಯತಿ ಸಭಾ ಭವನದಲ್ಲಿ ಜರುಗಿತು.
ಶಿಕ್ಷಣ ಸಂಯೋಜಕ ಪ್ರಕಾಶ್ ಬಿ.ಬಿ ನೋಡಲ್ ಅಧಿಕಾರಿಯಾಗಿ ಆಗಮಿಸಿದ್ದರು. ಅವರು ಈ ಸಂದರ್ಭ ಮಾತನಾಡಿ, ಗ್ರಾಮದಲ್ಲಿ ವಾರ್ಡ್ ಸಭೆ ಮಾಡಿ ಅದರ ಮೂಲಕ ಹಿಂದೆ ಆದ ಅಭಿವೃದ್ಧಿ ಕೆಲಸ ಮತ್ತು ಮುಂದೆ ಮಾಡಬೇಕಾದ ಅಭಿವೃದ್ಧಿ ಕೆಲಸಕ್ಕೆ ಗ್ರಾಮದ ಜನರ ಬೇಡಿಕೆಯನ್ನು ಸಂಬಂದ ಪಟ್ಟ ಇಲಾಖೆಯ ಅಧಿಕಾರಿಗಳಿಗೆ ಮುಖತ: ಸಾರ್ವಜನಿಕವಾಗಿ ತೆರೆದಿಡುವ ಕಾರ್ಯಕ್ಕೆ ಜನರು ಹೆಚ್ಚು ಸ್ಪಂದಿಸಲು ಗ್ರಾಮ ಸಭೆಗಳು ಪೂರಕ ಎಂದರು.

ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಬಾವಿ ಮಾಡಲು ಮತ್ತು ನೀರಿನ ಟಾಂಕಿ ಮಾಡಲು ಸ್ಥಳ ದಾನ ಮಾಡಿದ ರಾಮಚಂದ್ರ ಉಪಾಧ್ಯಾಯ ಕೂರಾಡಿ ಮತ್ತು ನರಸಿಂಹ ಉಪಾಧ್ಯಾಯ ಕೂರಾಡಿ ಇವರನ್ನು ಗ್ರಾಮ ಪಂಚಾಯತಿ ವತಿಯಿಂದ ಸನ್ಮಾನಿಸಲಾಯಿತು.

ಅಭಿವೃದ್ಧಿ ಅಧಿಕಾರಿ ಅರುಂಧತಿ ಏಸುಮನೆ ಗ್ರಾಮ ಪಂಚಾಯತಿ 21 – ಮತ್ತು 22 ನೇ ಸಾಲಿನ ವರದಿ ನೀಡಿದರು.

ಗ್ರಾಮಪಂಚಾಯತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ಕಾರ್ಯದರ್ಶಿ ಉಮೇಶ್ ಕಲ್ಯಾಣಪುರ, ಗ್ರಾಮ ಪಂಚಾಯತಿ ಉಪಾದ್ಯಕ್ಷೆ ಪದ್ಮಾವತಿ, ಗ್ರಾಮ ಪಂಚಾಯತಿ ಸದಸ್ಯರು ಮತ್ತು ನಾನಾ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು
