ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚೇರ್ಕಾಡಿಯಲ್ಲಿ 11 ವರ್ಷಗಳ ಕಾಲ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ಬ್ರಹ್ಮಾವರ ಕ್ಷೇತ್ರಶಿಕ್ಷಣಾಧಿಕಾರಿ ಕಚೇರಿಯ ಶಿಕ್ಷಣ ಸಂಯೋಜಕರಾಗಿ ಬಡ್ತಿ ಹೊಂದಿದ ಪ್ರಕಾಶ್ ಬಿ ಬಿ, ಅವರಿಗೆ ಚೇರ್ಕಾಡಿ ಗ್ರಾಮ ಪಂಚಾಯತ್ ನ ಅಧ್ಯಕ್ಷೆ ರೇಖಾಭಟ್ ರವರ ಅಧ್ಯಕ್ಷತೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ನಿಸ್ವಾರ್ಥವಾಗಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಎಸ್ಡಿಎಂಸಿ, ಚೇರ್ಕಾಡಿ ಗ್ರಾಮ ಪಂಚಾಯತ್, ಶಿಕ್ಷಕ ವೃಂದದವರು, ಪೋಷಕರು ಹಾಗೂ ವಿದ್ಯಾರ್ಥಿಗಳ ವತಿಯಿಂದ ಗೌರವ ಪೂರಕವಾಗಿ ಬೀಳ್ಕೊಡುಗೆ ನೀಡಲಾಯಿತು.


ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಚೇರ್ಕಾಡಿಯ ಸದಸ್ಯರಾದ ಹರೀಶ್ ಶೆಟ್ಟಿ ಹಾಗೂ ಕಮಲಾಕ್ಷ ಹೆಬ್ಬಾರ್ ಅವರು, ಎಸ್ಡಿಎಂಸಿ, ಗ್ರಾಮ ಪಂಚಾಯತ್, ಪೋಷಕರು ಹಾಗೂ ಶಿಕ್ಷಣ ಇಲಾಖೆಯನ್ನು ಒಳಗೊಂಡು ಶಾಲೆಯನ್ನು ಅಭಿವೃದ್ಧಿ ಪಥದತ್ತ ಸಾಗುವಂತೆ ಮಾಡಿದರು ಎಂಬುದನ್ನು ಸ್ಮರಿಸಿ ಅವರಿಗೆ ಶುಭಾಶಂಸನೆ ಸಲ್ಲಿಸಿದರು.
ಪ್ರೀತಿಯ ದ್ಯೋತಕವಾಗಿ ಚಿನ್ನದ ಉಂಗುರವನ್ನು ತೊಡಿಸಿ ಗೌರವಿಸಲಾಯಿತು.
ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬಿ.ಜಿ ಭಟ್ ರವರು ಶಾಲೆಯ ಹಳೆ ವಿದ್ಯಾರ್ಥಿ ವಿಶ್ವನಾಥ್ ಪ್ರಭುರವರು ಶಾಲೆಗೆ ದೇಣಿಗೆಯಾಗಿ ನೀಡಿದ 45 ಸಾವಿರ ಮೌಲ್ಯದ ಪ್ರೋಜೆಕ್ಟರ್, ಸ್ಕ್ರೀನ್ ಹಾಗೂ ಲ್ಯಾಪ್ಟಾಪ್ ಅನ್ನು ಶಾಲೆಗೆ ಹಸ್ತಾಂತರಿಸಿದರು.
ಇದೇ ವೇದಿಕೆಯಲ್ಲಿ ಶಾಲೆಯ ವೆಬ್ಸೈಟ್ ನ್ನು ಗ್ರಾಮದ ಪ್ರಥಮ ಪ್ರಜೆ ರೇಖಾ ಭಟ್ ಉದ್ಘಾಟಿಸಿದರು.
ಮಾರ್ಗದರ್ಶಿ ಅಧಿಕಾರಿಯಾಗಿ ಆಗಮಿಸಿದ ರೇವತಿ ರವರು ಶಾಲೆಯ ಚಟುವಟಿಕೆಗಳ ಬಗ್ಗೆ ಹಾಗೂ ಶಿಕ್ಷಕರ ಬದ್ಧತೆಯ ಬಗ್ಗೆ ಪ್ರಶಂಸೆಯ ಮಾತನಾಡಿದರು. ತದನಂತರ ವಿದ್ಯಾರ್ಥಿಗಳು ಆಂಗ್ಲಭಾಷೆಯಲ್ಲಿ ಸ್ಕಿಟ್ ಪ್ರಸ್ತುತಪಡಿಸಿದರು

ಪೋಷಕರು ತಮ್ಮ ಮಕ್ಕಳ ಕಲಿಕಾ ಪ್ರಗತಿಯನ್ನು ಖಾತರಿ ಪಡಿಸಿಕೊಂಡರು. ಈ ಸಂದರ್ಭದಲ್ಲಿ ಮಾಜಿ ಎಸ್ಡಿಎಂಸಿ ಅಧ್ಯಕ್ಷ ಸುಕೇಶ್ ನಾಯ್ಕ, ಎಸ್ಡಿಎಂಸಿ ಅಧ್ಯಕ್ಷ ಜಯ ನಾಯ್ಕ್, ತಾಯಂದಿರ ಸಮಿತಿಯ ಅಧ್ಯಕ್ಷೆ ಕವಿತಾ ಭಟ್, ಎಸ್ಡಿಎಂಸಿ ಸದಸ್ಯರು ಶಾಲೆಯ ಹಳೆ ವಿದ್ಯಾರ್ಥಿಗಳು, ಹೆತ್ತವರು, ಅಂಗನವಾಡಿ ಶಿಕ್ಷಕಿಯರು, ಪೋಷಕರು ಉಪಸ್ಥಿತರಿದ್ದರು.
ಪ್ರಭಾರ ಮುಖ್ಯೋಪಾಧ್ಯಾಯಿನಿ ಮಮತಾ ಸ್ವಾಗತಿಸಿ, ಶ್ರೀಮತಿ ಕಸ್ತೂರಿ ಧನ್ಯವಾದ ಸಮರ್ಪಿಸಿದರು.
ಸಮಾರಂಭದಲ್ಲಿ ಶ್ರೀಮತಿ ವಿಜಯಲಕ್ಷ್ಮಿ ಬೀಳ್ಕೊಂಡ ಪ್ರಕಾಶ್ ಬಿ ಬಿ ಯವರ ಸೇವೆಯ ಕುರಿತು ಮಾಹಿತಿ ನೀಡಿದರು. ಜಯಶೀಲ ಬಿ ರೋಟೆ ಕಾರ್ಯಕ್ರಮ ನಿರೂಪಿಸಿ, ಪ್ರೇಮ ಹಾಗೂ ನಯನ ಸಹಕರಿಸಿದರು.



































