ವರದಿ : ಶಫೀ ಉಚ್ಚಿಲ
ಕಾಪು : ಉಚ್ಚಿಲ ಬಡಾ ಗ್ರಾಮ ಪಂಚಾಯತ್ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 66 ರ ಪಣಿಯೂರು ಕ್ರಾಸ್ ಬಳಿ ಸಂಚಾರ ನಿಯಂತ್ರಣದ ಸದಾಶಯದಿಂದ ಇರಿಸಿರುವ ಬ್ಯಾರಿಕೇಡ್ ಗಳ ಅಳವಡಿಕೆ ಸದ್ಯ ಅಪಾಯಕ್ಕೆ ಆಹ್ವಾನ ನೀಡುವಂತಿದೆ.
ಅಪಘಾತ ನಿಯಂತ್ರಿಸಲು ಹಾಕಿರುವ ಬ್ಯಾರಿಕೇಡ್‌ಗಳು
ಮುರಿದುಬಿದ್ದು, ಸ್ವತಃ ಅಪಘಾತಕ್ಕೆ ಆಹ್ವಾನ ನೀಡುವ ಸ್ವರೂಪದಲ್ಲಿದೆ. ಮೂಲಾರ್ಥವನ್ನೇ ಕಳೆದುಕೊಂಡಿರುವ ರಾಷ್ಟ್ರೀಯ ಹೆದ್ದಾರಿ ಪಕ್ಕದ ಸರ್ವೀಸ್ ರಸ್ತೆಗಳ ನಿರ್ಮಾಣ ಇನ್ನೂ ಆಮೆಗತಿಯಲ್ಲಿ ಸಾಗುತ್ತಿದ್ದು, ಅನಿವಾರ್ಯವಾಗಿ ರಿಕ್ಷಾ ಚಾಲಕರು, ದ್ವಿಚಕ್ರ ವಾಹನ ಸವಾರರು ಹೆದ್ದಾರಿಯಲ್ಲೇ ವಿರುದ್ಧ ದಿಕ್ಕಿನಲ್ಲಿ ಚಲಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.


ಇಲ್ಲಿನ ಸಮಸ್ಯೆಗಳನ್ನು ಮನಗಂಡು ವ್ಯವಸ್ಥಿತವಾಗಿ ಸಿದ್ದಪಡಿಸಿ ನೀಡಿರುವ ಬ್ಯಾರಿಕೇಡ್ ಗಳು ಸ್ಥಳದಿಂದ ಮಾಯವಾಗಿರುವುದು ದಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಸ್ಥಳದಲ್ಲಿದ್ದ ಬ್ಯಾರಿಕೇಡ್ ಗಳನ್ನು ಮನಬಂದಂತೆ ಪದೇ ಪದೇ ಸ್ಥಳಾಂತರಿಸುತ್ತಿರುವ ಪರಿಣಾಮ ಬ್ಯಾರಿಕೇಡ್ ಕೊರತೆ ಉಂಟಾಗಿದೆ. ಸಂಬಂಧಪಟ್ಟ ಇಲಾಖೆ ಕೂಡಲೇ ಈ ಬಗ್ಗೆ ಗಮನ ಹರಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದಿದ್ದಲ್ಲಿ
ಚಾಲಕರ ಪಾಲಿಗೆ ಅಪಾಯ ಕಟ್ಟಿಟ್ಟ ಬುತ್ತಿ.


































