ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಪ್ರಶಸ್ತೀ ಪುರಸ್ಕೃತ ಹಿರಿಯ ಮದ್ದಳೆಗಾರ ಯಕ್ಷಗಾನದ ಸವ್ಯಸಾಚಿ ಮೂಲ ಪರಂಪರೆಯ ಯಕ್ಷಗಾನವನ್ನು ಉಳಿಸಿ ಬೆಳೆಸಿಕೊಂಡು ಬಂದ ಚೇರ್ಕಾಡಿ ಮಂಜುನಾಥ ಪ್ರಭು ಅವರಿಂದ ಚೇರ್ಕಾಡಿಯ ಶಾರದಾ ಪ್ರೌಢ ಶಾಲೆಯಲ್ಲಿ ಮಂಗಳವಾರ ಶತಮಾನ ಪೂರ್ವದ ಯಕ್ಷಗಾನ ಬಯಲಾಟ ‘ಶ್ರೀರಾಮ ದರ್ಶನ’ ಪ್ರೇಕ್ಷಕರ ಮೆಚ್ಚುಗೆ ಪಡೆದಿದೆ.

ಕರಾವಳಿಯ ಗಂಡು ಕಲೆ ಎನ್ನುವುದಕ್ಕೆ ಅಪವಾದವಾಗಿ 30 ವರ್ಷದಿಂದ ಚೇರ್ಕಾಡಿಯಲ್ಲಿ ಕಲಾಶ್ರೀ ಬಾಲಕಿಯರ ಯಕ್ಷಗಾನ ಬಯಲಾಟ ಮೇಳದ ಸಂಚಾಲಕ ಪ್ರಭುಗಳನಿರ್ದೇಶನದಿಂದ ಬಾಲಕಿಯರಿಂದ ಪರಂಪರೆಯ ಶೈಲಿಯ ರಂಗಸ್ಥಳ ಕೇವಲ ದೀವಟಿಗೆ ಮಂದ ಬೆಳಕಿನ ಬಯಲಾಟ ಶ್ರೀ ರಾಮ ದರ್ಶನ ಪ್ರೇಕ್ಷಕರನ್ನು ಶತಮಾನ ಪೂರ್ವದ ಕಾಲಮಾನಕ್ಕೆ ಕೊಂಡು ಹೋಗಿದೆ.

ಬಿದಿರು ಕೋಲಿನ ಮೆಲ್ಚಾವಣಿ, ಮಾವಿನ ಎಲೆಗಳ ತೋರಣ ಸಗಣಿಯನ್ನು ಸಾರಿಸಿದ ರಂಗಸ್ಥಳ ಇದೆಲ್ಲವೂ ಕಣ್ಣು ಮನಸ್ಸು ದೇಹ ಮತ್ತು ಆರೋಗ್ಯಕ್ಕೆ ಕೂಡಾ ಸಹಕಾರಿ ಎನ್ನುವುದು ವೈಜ್ಞಾನಿಕ ಸತ್ಯ.

30 ವರ್ಷದಿಂದ ದೇಶದ ನಾನಾ ಭಾಗದಲ್ಲಿ ಇವರ ಮೇಳದ ಶ್ರೀಕೃಷ್ಣ ಪಾರಿಜಾತ 1120 ಪ್ರದರ್ಶನ ನೀಡಿ ದಾಖಲೆ ಮಾಡಿದೆ. ಇನ್ನು ಅನೇಕ ಪುರಾಣ ಪ್ರಸಂಗಗಳು ನೂರಾರು ಇವರ ತಂಡದಿಂದ ಪ್ರೇಕ್ಷಕರ ಮನಗೆದ್ದಿದೆ.

ಇವರ ಮೇಳದಲ್ಲಿ ಯಕ್ಷಗಾನದ ಸಾಂಪ್ರದಾಯಕ ಉಡುಗೆ , ಭಾಗವತಿಕೆ , ಹೆಜ್ಜೆ ಮಾತುಗಾರಿಕೆ ಎಲ್ಲವೂ ಶ್ರುತಿ ಲಯ ಬದ್ಧವಾಗಿರುತ್ತದೆ.
ಪ್ರತೀ ಬಾಲಕಿಯರು 8 ನೇ ತರಗತಿಯಿಂದ ಪದವಿ ಶಿಕ್ಷಣದ ಶಾಲಾ ವಿದ್ಯಾರ್ಥಿನಿಯರು ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ 22 ಮಂದಿ ಭಾಗವಹಿಸಿದ್ದರು.

ಕಾರ್ಯಕ್ರಮವನ್ನು ಅವದೂತರಾದ ವಿನಯ ಗೂರೂಜಿಯವರು ಉದ್ಘಾಟಿಸಿ ಮೆಚ್ಚುಗೆ ವ್ಯಕ್ತ ಪಡಿಸಿದರು.
8ವರ್ಷದ ಹಿಂದೆ ಇವರ ತಂಡದಲ್ಲಿದ್ದು ತಾಳಮದ್ದಳೆ ಮತ್ತು ಯಕ್ಷಗಾನ ಪಾತ್ರ ಮಾಡಿದ ಪ್ರಖರ ವಾಗ್ಮೀ ಚೈತ್ರ ಕುಂದಾಪುರ ಗುರು ವಂದನೆ ಸಲ್ಲಿಸಿ ಮಾತನಾಡಿ.
ನಾನು ಇಂದು ನಿರರ್ಗಳವಾಗಿ ಗಂಟೆ ಗಟ್ಟಲೆ ಮಾತನಾಡಲು ಇವರ ತಂಡದಲ್ಲಿ ನಾನು ಪ್ರಭುಗಳಿಂದ ಕಲಿತ ಮಾತುಗಾರಿಕೆ ಕಾರಣವಾಗಿದೆ. ಅವರ ಬೆಂಬಲವಾಗಿ ನನ್ನಂತ ಅನೇಕರಿದ್ದಾರೆ ಎಂದರು.

ಕೋಟ ಶಿವರಾಮ ಕಾರಂತರ ಯಕ್ಷಗಾನ ತಂಡದಲ್ಲಿ ದೇಶ ವಿದೇಶದಲ್ಲಿ ಮದ್ದಳೆಗಾರರಾಗಿ ಅನುಭವ ಪಡೆದು, ಯಕ್ಷಗಾನದ ಮೂಲ ಪರಂಪರೆಯನ್ನು ಉಳಿಸುವ ಉದ್ದೇಶದಿಂದ ಕಾರ್ಯಕ್ರಮ ಮಾಡಲಾಗಿದೆ ಎನ್ನುತ್ತಾರೆ 80 ವರ್ಷದ ಮಂಜುನಾಥ ಪ್ರಭುಗಳು.


































