ಬೆಂಗಳೂರು : ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದಿನಿಂದ ಇನ್ನೂ ನಾಲ್ಕು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯದ ಕರಾವಳಿ ಮತ್ತು ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ನಾಳೆ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಎಲ್ಲೆಲ್ಲಿ ಮಳೆ ? :

ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಮತ್ತು ಹಾಸನದಲ್ಲಿ ಮೇ 16, 17 ರಂದು ಗುಡುಗು ಮಿಂಚು ಸಹಿತ ಧಾರಾಕಾರ ಮಳೆ ಬೀಳುವ ಸಾಧ್ಯತೆ ಇದ್ದು, ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಎಲ್ಲೋ ಅಲರ್ಟ್ ಘೋಷಿಸಿದೆ.
ಅಲ್ಲದೆ, ಮೇ.18, 19 ರಂದು ಈ ಜಿಲ್ಲೆಗಳಲ್ಲಿ ಇನ್ನಷ್ಟು ಹೆಚ್ಚು ಮಳೆ ಬೀಳಲಿದ್ದು, ಆರೆಂಜ್ ಅಲರ್ಟ್ ಘೋಷಿಸಿದೆ.
ಬೆಂಗಳೂರು, ಬೆಂ.ಗ್ರಾಮಾಂತರ, ರಾಮನಗರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಚಾಮರಾಜನಗರ, ಚಿತ್ರದುರ್ಗ, ಬಳ್ಳಾರಿ ಮತ್ತು ದಾವಣಗೆರೆ, ಬೀದರ್, ವಿಜಯಪುರ, ರಾಯಚೂರು, ಕಲಬುರಗಿ, ರಾದಗಿರಿ, ಕೊಪ್ಪಳ,ಗದಗ, ಹಾವೇರಿ, ಬಾಗಲಕೋಟೆ ಮತ್ತು ಬೆಳಗಾವಿಯಲ್ಲಿ ಮುಂದಿನ 4 ದಿನ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಅವಧಿಗೂ ಮುಂಚೆ ಮುಂಗಾರು ಮಳೆ ಆಗಮನ :

ಅಸಾನಿ ಚಂಡಮಾರುತದ ಬೆನ್ನಲ್ಲೇ ನೈರುತ್ಯ ಮಂಗಾರು ಚುರುಕು ಕಂಡಿದೆ. ಹೀಗಾಗಿ ನಿಗದಿತ ಅವಧಿಗಿಂತ ಮುಂಚೆಯೇ ದೇಶದಲ್ಲಿ ಮುಂಗಾರು ಮಳೆ ಆರಂಭವಾಗುವ ನಿರೀಕ್ಷೆ ಇದ್ದು, ಮೇ 27ಕ್ಕೆ ನೈರುತ್ಯ ಮುಂಗಾರು ಕೇರಳಕ್ಕೆ ಆಗಮಿಸುವ ಸಾಧ್ಯತೆ ಇದೆ. ಸಾಮಾನ್ಯವಾಗಿ ಜೂನ್ 1 ಕ್ಕೆ ಕೇರಳವನ್ನು ಮುಂಗಾರು ಪ್ರವೇಶಿಸಬೇಕಾಗಿತ್ತು. ಆದರೆ, ಈ ಬಾರಿ ಐದಾರು ದಿನ ಮುಂಚಿತವಾಗಿಯೇ ಮಾನ್ಸೂನ್ ಮಳೆಯ ಆಗಮನವಾಗಲಿದೆ.
ಮೇ 27ಕ್ಕೆ ಕೇರಳವನ್ನು ಮುಂಗಾರು ಮಳೆ ಪ್ರವೇಶಿಸಿದರೂ ರಾಜ್ಯವನ್ನು ಮಾನ್ಸೂನ್ ಮೇ ಅಂತ್ಯ ಅಥವಾ ಜೂನ್ 1ಕ್ಕೆ ಪ್ರವೇಶಿಸಲಿದೆ.


































