ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ವಿದ್ಯೆಯಿಂದ ದೂರ ಇದ್ದರವರು ಸಮಾಜದಿಂದ ದೂರ ಇರುತ್ತಾರೆ. ಯಾವೂದೇ ಒಂದು ಜನಾಂಗ ಅಭಿವೃದ್ಧಿ ಹೊಂದಲು ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಉಡುಪಿ ಶಾಸಕ ಕೆ. ರಘುಪತಿ ಭಟ್ ಹೇಳಿದರು.

ಶನಿವಾರ ಹಂದಾಡಿ ಗ್ರಾಮ ಪಂಚಾಯತಿಯ ಬಲ್ಜಿ ಕೊರಗ ಕಾಲೋನಿಯಲ್ಲಿ ಜಿಲ್ಲಾ ಪಂಚಾಯತ್, ಐ.ಟಿ.ಡಿ.ಪಿ ಉಡುಪಿ, ಹಾಗೂ ಕೊರಗ ಅಭಿವೃದ್ಧಿ ಸಂಘ ಬಲ್ಜಿ ಇವರ ಸಹಯೋಗದೊಂದಿಗೆ ರೂ. 20.00 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಕೊರಗ ಸಮುದಾಯ ಭವನವನ್ನು ಉದ್ಘಾಟಿಸಿ ಮಾತನಾಡಿ, ಇಲ್ಲಿನ ಕಾಲೋನಿ ಮಕ್ಕಳಿಗೆ ಶಾಲಾ ಶಿಕ್ಷಣದ ನಂತರ ಸಂಜೆ ಹೊತ್ತು ಇಲ್ಲಿನ ಕೊರಗ ಮಕ್ಕಳಿಗೆ ತರಗತಿ ಮಾಡಿ ಯಶಸ್ವಿಯಾದಂತೆ ಸರಕಾರದ ವತಿಯಿಂದ ಪ್ರತೀ ಕೊರಗ ಕಾಲೋನಿಯಲ್ಲಿ ಶಿಕ್ಷಣ ವ್ಯವಸ್ಥೆ ಮಾಡಲು ಪ್ರಯತ್ನ ಮಾಡಲಾಗುವುದು ಮತ್ತು ಯಕ್ಷಗಾನದ ಅಭಿರುಚಿ ಇರುವ ಇಲ್ಲಿನ ಮಕ್ಕಳಿಗೆ ಯಕ್ಷ ಶಿಕ್ಷಣ ತರಗತಿ ಮಾಡಲು ಪ್ರಯತ್ನ ಮಾಡುತ್ತೇನೆ ಎಂದರು.

ಇದೇ ಸಂದರ್ಭದಲ್ಲಿ ಸಂಜೆ ತರಗತಿ ನೀಡುತ್ತಿರುವ ಶಿಕ್ಷಕಿಯರಾದ ನವ್ಯ , ಸರಿತಾ ಮತ್ತು ಕೊರಗ ಸಮುದಾಯದ ನಾಟಿ ವೈದ್ಯೆ ಸ್ವ ಪ್ರಯತ್ನದಿಂದ ತೆರೆದ ಬಾವಿ ನಿರ್ಮಿಸಿಕೊಂಡ ಸುಶೀಲ ಮತ್ತು ಶಾಂತಾರನ್ನು ಸನ್ಮಾನಿಸಲಾಯಿತು.

ಹಂದಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಉದಯ ಪೂಜಾರಿ, ಉಪಾಧ್ಯಕ್ಷೆ ಶೋಭಾ ಪೂಜಾರಿ, ಬ್ರಹ್ಮಾವರ ತಾಲೂಕು ಪಂಚಾಯತ್ ಮಾಜಿ ಸದಸ್ಯ ಸುಧೀರ್ ಶೆಟ್ಟಿ, ಬಲ್ಜಿ ಕೊರಗ ಸಂಘಟನೆಯ ಅಧ್ಯಕ್ಷ ಸುಧೀರ್, ಐ.ಟಿ.ಡಿ.ಪಿ ಅಧಿಕಾರಿ ವಿಶ್ವನಾಥ್ ಶೆಟ್ಟಿ, ಹಂದಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸತೀಶ್ ನಾಯ್ಕ್ ಉಪಸ್ಥಿತರಿದ್ದರು.

ಕೊರಗ ಮುಖಂಡರಾದ, ಗಣೇಶ್ ಬಾರ್ಕೂರು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ, ಗಣೇಶ್ ಕುಂದಾಪುರ ಸ್ವಾಗತಿಸಿ , ಸುದರ್ಶನ ವಂದಿಸಿದರು.




































