ಮಂಡ್ಯ : ಮಗುವಿನ ಎದುರೇ ತಾಯಿಯೊಬ್ಬಳು ನೇಣಿಗೆ ಶರಣಾಗಿರುವ ಘಟನೆ ನಗರದ ಕೆಂಪೇಗೌಡ ಬಡಾವಣೆಯಲ್ಲಿ ಗುರುವಾರ ನಡೆದಿದೆ.
ಕವಿತಾ (36) ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಒಂದು ವರ್ಷದ ಹೆಣ್ಣು ಮಗುವಿನ ಕಣ್ಣೆದುರಲ್ಲೇ ಮಗುವಿಗಾಗಿ ಕಟ್ಟಿದ್ದ ಜೋಕಾಲಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕವಿತಾ 9 ವರ್ಷದ ಹಿಂದೆ ದೈಹಿಕ ಶಿಕ್ಷಕರಾಗಿರುವ ರವಿಕುಮಾರ್ ಎಂಬುವವರನ್ನು ಮದುವೆಯಾಗಿದ್ದರು. ದಂಪತಿಗೆ 7 ವರ್ಷದ ಗಂಡು ಮಗು, 1 ವರ್ಷದ ಹೆಣ್ಣು ಮಗು ಇದೆ. ಬುಧವಾರ ಬೆಳಗ್ಗೆ ರವಿಕುಮಾರ್ ಶಾಲೆಗೆ ತೆರಳಿದ್ದಾರೆ. ಈ ವೇಳೆ ಕವಿತಾ ನೇಣಿಗೆ ಶರಣಾಗಿದ್ದಾರೆ.

ಸಾವಿಗೆ ನಿಖರ ಕಾರಣ ಇದುವರೆಗೂ ತಿಳಿದುಬಂದಿಲ್ಲ. ಆತ್ಮಹತ್ಯೆಗೂ ಮುನ್ನ ಕವಿತಾ ಬರೆದಿರುವ ಡೆತ್ ನೋಟ್‌ನಲ್ಲಿ ಇಂದು ನನ್ನ ಜೀವನದ ಕೊನೆಯ ದಿನ. ನನ್ನ ಎಲ್ಲಾ ಆಭರಣಗಳು ನನ್ನ ಮಗ ಮತ್ತು ಮಗಳಿಗೆ ಸೇರಬೇಕು. ಇಲ್ಲವಾದರೆ ನಾನು ಮತ್ತು ನನ್ನ ದೇವರು ನಿಮ್ಮನ್ನು ಕ್ಷಮಿಸುವುದಿಲ್ಲ. ಇವು ನಾನು ಕಷ್ಟಪಟ್ಟು ದುಡಿದು ಮಾಡಿಸಿಕೊಂಡಿರುವ ಆಭರಣಗಳು ಎಂದು ಬರೆದಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
