ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ: ಬಾರಕೂರು, ಬಂಡೀಮಠ, ಕೂರಾಡಿ, ನಡೂರು ಮೂಲಕ ಕೊಕ್ಕರ್ಣೆಗೆ ಹೋಗುವಾಗ ನಡೂರು ಗುಡ್ಡೆ ಅಂಗಡಿಯಿಂದ ಮುಂದೆ ರಸ್ತೆಯ 2 ಭಾಗದಲ್ಲಿ ಬಾನೆತ್ತರಕ್ಕೆ ಬೆಳೆದು ನಿಂತ ಅಕೇಶಿಯಾ ಮರಗಳು ಸಂಚಾರಕ್ಕೆ ಅಪಾಯ ತಂದೊಡ್ಡಿದೆ.

ಇಲ್ಲಿನ ರಸ್ತೆಯ ಎರಡು ಕಡೆಯಲ್ಲಿ ಈ ಹಿಂದೆ ಕರ್ನಾಟಕ ಕ್ಯಾಷ್‍ಯೂ ಡೆವಲಪ್‍ಮೆಂಟ್ ಕಾರ್ಪೋರೇಶನ್ ಅವರು ಅರಣ್ಯ ಇಲಾಖೆಯ ಮೂಲಕ ನೆಡಲಾದ ಅಕೇಶಿಯಾ ಮರಗಳು ಇಂದು ಮಳೆಗಾಲದಲ್ಲಿ ರಸ್ತೆಗೆ ಬಿದ್ದು ಸಂಚಾರಕ್ಕೆ ಕುತ್ತು ತರುತ್ತಿದೆ.

ಪ್ರತೀ ವರ್ಷ ಮರಗಳು ರಸ್ತೆಗೆ ಉರುಳಿ ಬೀಳುವುದಕ್ಕೆ ಇಲ್ಲಿನ ಮಾಜಿ ತಾಲೂಕು ಪಂಚಾಯತಿ ಸದಸ್ಯ ಭುಜಂಗ ಶೆಟ್ಟಿ ಅವರು ಅಪಾಯಕಾರಿ ಮರವನ್ನು ಕಡಿಯುವಂತೆ ಇಲಾಖೆಯ ಮತ್ತು ಅಧಿಕಾರಿಗಳ ಗಮನಸೆಳೆದಿದ್ದರು.
ಪರಿಣಾಮ ಕಳೆದ ವರ್ಷ ಕೆಲವು ಮರಗಳನ್ನು ಅಲ್ಲಲ್ಲಿ ಕಡಿಯಲಾಗಿತ್ತು. ಈ ವರ್ಷ ಈಗಾಗಲೇ ಬಂದ ಗಾಳಿ ಮಳೆಗೆ ಹಲವಾರು ಮರಗಳು ಉರುಳಿ ರಸ್ತೆಗೆ ಬಿದ್ದುದು ಕಂಡು ಬರುತ್ತದೆ.

ಅರಣ್ಯ ಇಲಾಖೆಯವರಿಗೆ ತಿಳಿಸಿದರೆ ಕೆಸಿಡಿಸಿ ಇಲಾಖೆಯನ್ನು ತೋರಿಸುತ್ತಾರೆ. ಅವರಿಗೆ ಹೇಳಿದರೆ ಅರಣ್ಯ ಇಲಾಖೆಯನ್ನು ತೋರಿಸುತ್ತಾರೆ.
ಕೇಂದ್ರ ಸರಕಾರವೇ ನೀರಿನ ಅಂತರ್ಜಲವನ್ನು ಅಪಾರವಾಗಿ ಹೀರುವ ಆಕೇಶಿಯಾ ಮರವನ್ನು ನಿರ್ಮೂಲನೆ ಮಾಡುವಂತೆ ಹೇಳಿದೆ. ಆದರೆ, ಸಂಚಾರಕ್ಕೆ ಅಪಾಯವನ್ನು ತರುವ ಇಲ್ಲಿನ ಮರಗಳನ್ನು ಕಡಿಯುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.




































