ವರದಿ : ಶ್ರೀದತ್ತ ಹೆಬ್ರಿ
ಹೆಬ್ರಿ : ಸರ್ಕಾರಿ ಶಾಲೆಗಳ ಬಲವರ್ಧನೆಗೆ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಗ್ರಾಮೀಣ ಪ್ರದೇಶದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂದು ಕರ್ನಾಟಕ ಪಬ್ಲಿಕ್ ಸ್ಕೂಲ್ ಗಳನ್ನು ಆರಂಭಿಸಲಾಗಿದೆ. ಕಾರ್ಕಳ ಕ್ಷೇತ್ರದಲ್ಲಿ ೩ ಪಬ್ಲಿಕ್ ಸ್ಕೂಲ್ ಗಳನ್ನು ತೆರೆಯಲಾಗಿದ್ದು ಮುನಿಯಾಲಿನ ಕೆಪಿಎಸ್ನಲ್ಲಿ ೭೦೦ ಮಕ್ಕಳು ಸೇರ್ಪಡೆಗೊಂಡಿದ್ದಾರೆ. ಕೆಪಿಎಸ್ ಗೆ ಸಕಲ ವ್ಯವಸ್ಥೆಯೊಂದಿಗೆ ಕ್ರೀಡೆ, ಸಂಗೀತ, ಚಿತ್ರಕಲೆ ಸಹಿತ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ನೀಡಲಾಗುತ್ತದೆ ಎಂದು ಇಂಧನ ಮತ್ತು ಕನ್ನಡ ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಹೇಳಿದರು.
ಅವರು ಸೋಮೇಶ್ವರಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೩೨ ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಶಾಲಾ ಕಟ್ಟಡವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.


ಕಾರ್ಕಳ ಕ್ಷೇತ್ರದ ೨೪೦ ಸರ್ಕಾರಿ ಶಾಲೆಗಳಿಗೆ ಅತ್ಯುತ್ತಮವಾದ ಅಡುಗೆ ಕೋಣೆ ನಿರ್ಮಿಸಲಾಗಿದೆ. ಅದ್ಯತೆಯ ನೆಲೆಯಲ್ಲಿ ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕೆ ಅನುದಾನ ನೀಡಲಾಗುತ್ತದೆ. ಕ್ಷೇತ್ರದಲ್ಲಿ ಶೈಕ್ಷಣಿಕವಾದ ಉತ್ತಮ ವಾತಾವರಣ ನಿರ್ಮಾಣಗೊಂಡು ಯುವಸಮುದಾಯಕ್ಕೆ ಉದ್ಯೋಗ ದೊರೆಯಬೇಕು. ಅದಕ್ಕಾಗಿ ಕಾರ್ಕಳದಲ್ಲಿ ನರ್ಸಿಂಗ್ ಕಾಲೇಜು, ಕಾರ್ಕಳ ಜಪಾನ್ ಟೆಕ್ನಾಲಜಿ ಕೋರ್ಸ್ ಸಂಸ್ಥೆಯನ್ನು ಆರಂಭಿಸಲಾಗಿದೆ ಎಂದ ಸಚಿವ ನಾಡ್ಪಾಲು ಗ್ರಾಮದ ಸಮಗ್ರ ಅಭಿವೃದ್ಧಿಗೆ ಆದ್ಯತೆಯ ನೆಲೆಯಲ್ಲಿ ವಿಶೇಷ ಒತ್ತು ನೀಡಲಾಗುವುದು ಎಂದರು.
ಮಾದರಿ ಶಾಲೆಯಾಗಿಸಲು ಪ್ರಯತ್ನ : ನಾಡ್ಪಾಲು ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ ಹೆಗ್ಡೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಸೋಮೇಶ್ವರಪೇಟೆ ಶಾಲೆಯನ್ನು ಮಾದರಿ ಶಾಲೆಯಾಗಿ ರೂಪಿಸಲು ನಾವೆಲ್ಲ ಸೇರಿ ಶ್ರಮಿಸಬೇಕಿದೆ, ಶಾಶ್ವತ ಯೋಜನೆಯ ಮೂಲಕ ಶಾಲೆಯ ಅವಶ್ಯಕತೆಯನ್ನು ಪೂರೈಸಬೇಕಿದೆ. ನೂತನ ಧ್ವಜಸ್ಥಂಭದ ನಿರ್ಮಾಣ ಸಹಿತ ಹಲವು ಅಭಿವೃದ್ಧಿ ಕಾರ್ಯಗಳನ್ನು ನಡೆಸಲು ಎಲ್ಲರ ಸಹಕಾರ ಕೋರಿದರು.

ಕಟ್ಟಡದ ಗುತ್ತಿಗೆದಾರರಾದ ಹೆರ್ಗ ದಿನಕರ ಶೆಟ್ಟಿ ಮತ್ತು ನಾಡ್ಪಾಲು ಸುಧಾಕರ ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು. ನಾಡ್ಪಾಲು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನವೀನ್ ಕುಮಾರ್, ಹೆಬ್ರಿ ತಹಶೀಲ್ಧಾರ್ ಪುರಂದರ್ ಕೆ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಶಶಿಧರ್ ಕೆಜಿ, ಪಿಡ್ಲ್ಯುಡಿ ಇಲಾಖೆಯ ಸೋಮಶೇಖರ್, ಶಿಕ್ಷಣ ಸಂಯೋಜಕ ವೆಂಕಟರಮಣ ಕಲ್ಕೂರ್, ಸಿಆರ್ಪಿ ಪ್ರತಿಮಾ, ಮುಖ್ಯ ಶಿಕ್ಷಕ ಮುರಳೀಧರ ಭಟ್, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಸುಪ್ರೀತಾ ಶೆಟ್ಟಿ, ಶಿಕ್ಷಕರಾದ ಶರ್ಮಿಳ, ಹೇಮಲತಾ, ಜಯಶ್ರೀ ಬಿ ಪೂಜಾರಿ, ವೀಣಾ, ಶಾಲಾಭಿವೃದ್ಧಿ ಸಮಿತಿಯ ಸದಸ್ಯರು, ಸ್ಥಳೀಯ ಮುಖಂಡರು,ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು. ಶರ್ಮಿಳಾ ನಿರೂಪಿಸಿ, ಮುರಳೀಧರ ಭಟ್ ಸ್ವಾಗತಿಸಿದರು.


































