ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ: ಸಂಪರ್ಕ ವಂಚಿತ ಕಾಡು ಬೆಟ್ಟಗಳ ಪ್ರದೇಶದಲ್ಲಿ ವಯಸ್ಕರನ್ನು ಅನಾರೋಗ್ಯ ಪೀಡಿತರನ್ನು ಜೋಲಿಯಲ್ಲಿ ಹೊತ್ತು ತರುವ ವಿದ್ಯಮಾನ ಕೆಲವೆಡೆಯಲ್ಲಿ ಇನ್ನೂ ಇದ್ದರೆ ನಗರ ಭಾಗ ಮಧ್ಯವಾದ ಬ್ರಹ್ಮಾವರ ಆಕಾಶವಾಣಿ ಬಳಿಯ ರಾಷ್ಟ್ರೀಯ ಹೆದ್ದಾರಿ ೬೬ ಮಠದಕೆರೆ ಬಳಿಯ ನಿವಾಸಿ ಅಕ್ಕಯ್ಯ ದಾಸ್ (೮೦ ವರ್ಷ) ಇವರನ್ನು ವಾರಕ್ಕೆ ೩ ಬಾರಿ ಉಡುಪಿಗೆ ಡಯಾಲಿಸಿಸ್ ಗಾಗಿ ಅಟೋ ರೀಕ್ಷಾದಲ್ಲಿ ಹೋಗಲು ರಸ್ತೆಯಿಂದ ೧೦ ಮೀಟರ್ ದೂರಕ್ಕೆ ಸುತ್ತು ಬಳಸಿ ಅರ್ಧ ಕಿಮೀ ದೂರ ಇಬ್ಬರು ಹೊತ್ತುಕೊಂಡು ಬಂದು ಅಟೋದಲ್ಲಿ ಹೋಗಿ ಬರುತ್ತಿದ್ದಾರೆ.
೪ ತಲೆ ಮಾರಿನಿಂದ ಇಲ್ಲಿನ ಕೆಲವು ಮನೆಯವರು ಹುಟ್ಟಿ ಬೆಳೆದ ಮನೆಯಿಂದ ನಿರಾತಂಕವಾಗಿ ಸಂಚಾರ ಮಾಡುತ್ತಿದ್ದು ರಾಷ್ಟ್ರೀಯ ಹೆದ್ದಾರಿ ೬೬ ಆದ ಬಳಿಕ, ರಸ್ತೆ ಬದಿಯ ಜಾಗಕ್ಕೆ ಕೋಟಿ ಬೆಲೆಯ ಹಣ ಬಂದ ನಂತರ ಇಲ್ಲಿನ ವ್ಯಕ್ತಿಯೊಬ್ಬರು ನಡೆದಾಡುವ ದಾರಿ ಬಂದ್ ಮಾಡಿರುವುದು ಇಂತಹ ಅವಾಂತರಕ್ಕೆ ಕಾರಣವಾಗಿದೆ.

ಗುರುವಾರ ಬೆಳಿಗ್ಗೆ ಭಾರೀ ಮಳೆಯಲ್ಲಿ ಕೂಡಾ ಡಯಾಲಿಸಿಸ್‌ಗೆ ಕೊಂಡು ಹೋಗುತ್ತಿರುವಾಗ ಅಕ್ಕಯ್ಯ ದಾಸ್ ದಿಕ್ಸೂಚಿ ನ್ಯೂಸ್ ನೊಂದಿಗೆ ಮಾತನಾಡಿ, ಇಲ್ಲಿ ಹತ್ತಿರ ಇರುವ ವಿಶಾಲವಾದ ಕೆರೆ ಮತ್ತು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಬಳಿ ೪ ತಲೆಮಾರಿನಿಂದ ಇದ್ದ ನಮಗೆ ದಾರಿ ಬಂದ್ ಮಾಡಿ ಸಂಚಾರಕ್ಕೆ ತೊಂದರೆಯಾಗಿದೆ. ಅಧಿಕಾರಿಗಳು ಜನಪ್ರತಿನಿಧಿಗಳು ಮುದಿ ಜೀವಕ್ಕೆ ಸಂಚಾರ ವ್ಯವಸ್ಥೆಗೆ ನೆರವಾಗುವಂತೆ ವಿನಂತಿಸಿದ್ದಾರೆ.


































