ನವದೆಹಲಿ : ಭಾರತದಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡುವ ಪ್ರಮುಖ ಕಂಪನಿ ಒಪ್ಪೋ ಇಂಡಿಯಾ ಸುಮಾರು 4,389 ಕೋಟಿ ರೂ. ಕಸ್ಟಮ್ಸ್ ಸುಂಕ ವಂಚನೆ ನಡೆಸಿರುವುದನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಬುಧವಾರ ಪತ್ತೆ ಮಾಡಿದೆ. ಮೊಬೈಲ್ ಕಂಪನಿ ಒಪ್ಪೋ ಇಂಡಿಯಾದ ಆವರಣದಲ್ಲಿ ಆದಾಯ ಗುಪ್ತಚರ ನಿರ್ದೇಶನಾಲಯ (DRI) ಶೋಧ ನಡೆಸಿದ್ದು, ಕಂಪನಿಯಿಂದ 4,389 ಕೋಟಿ ರೂ.ಗಳ ಕಸ್ಟಮ್ಸ್ ಸುಂಕ ವಂಚನೆಯನ್ನು ಪತ್ತೆಹಚ್ಚಿದೆ. ಈ ಬಗ್ಗೆ ಬುಧವಾರ ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಒಪ್ಪೋ ಇಂಡಿಯಾ ಚೀನಾ ಮೂಲದ ಗುವಾಂಗ್ಡಾಂಗ್ ಒಪ್ಪೊ ಮೊಬೈಲ್ ಟೆಲಿಕಮ್ಯುನಿಕೇಷನ್ಸ್ ಕಾರ್ಪೊರೇಷನ್ ಲಿಮಿಟೆಡ್‌ನ ಅಂಗಸಂಸ್ಥೆಯಾಗಿದೆ.
ಮನಿ ಲಾಂಡರಿಂಗ್ ತನಿಖೆಯಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಚೀನಾದ ಸ್ಮಾರ್ಟ್ ಫೋನ್ ತಯಾರಕ ವಿವೋ ಮತ್ತು ಸಂಬಂಧಿತ ಸಂಸ್ಥೆಗಳ ವಿರುದ್ಧ ಭಾರತದಾದ್ಯಂತ 40ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಿದ ಕೆಲವು ದಿನಗಳ ನಂತ್ರ ಈ ಶೋಧಗಳು ನಡೆದಿದ್ದು, ತೆರಿಗೆಗಳನ್ನು ತಪ್ಪಿಸಲು ಕಂಪನಿಯ ಭಾರತೀಯ ವಿಭಾಗವು ತನ್ನ ವಹಿವಾಟಿನ ಸುಮಾರು 50 ಪ್ರತಿಶತವನ್ನು ಚೀನಾಕ್ಕೆ 62,476 ಕೋಟಿ ರೂ. ಕಳುಹಿಸಿದೆ ಎಂದು ಇಡಿ ಮಾಹಿತಿ ನೀಡಿದೆ.

ಚೀನಾದ ಗುವಾಂಗ್ಡಾಂಗ್ ಒಪ್ಪೊ ಮೊಬೈಲ್ ಟೆಲಿಕಮ್ಯುನಿಕೇಷನ್ಸ್ ಕಾರ್ಪೊರೇಷನ್ ಲಿಮಿಟೆಡ್‌ನ ಅಂಗಸಂಸ್ಥೆಯಾದ ಮೆಸರ್ಸ್ ಒಪ್ಪೊ ಮೊಬೈಲ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಗೆ ಸಂಬಂಧಿಸಿದ ತನಿಖೆಯ ಸಮಯದಲ್ಲಿ, ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ಸುಮಾರು 4,389 ಕೋಟಿ ರೂ.ಗಳ ಕಸ್ಟಮ್ಸ್ ಸುಂಕ ವಂಚನೆಯನ್ನ ಪತ್ತೆಹಚ್ಚಿದೆ ಎಂದು ಹಣಕಾಸು ಸಚಿವಾಲಯ ಬುಧವಾರ ಹೇಳಿಕೆಯಲ್ಲಿ ಈ ಕುರಿತು ಸ್ಪಷ್ಟ ಪಡಿಸಿದೆ.
ಒಪ್ಪೋ ಭಾರತದಲ್ಲಿ ಜನಪ್ರಿಯ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಆಗಿದ್ದು, ಒಪ್ಪೋ ಇಂಡಿಯಾವು ಭಾರತದಾದ್ಯಂತ ಮೊಬೈಲ್ ಹ್ಯಾಂಡ್‌ಸೆಟ್‌ಗಳ ಉತ್ಪಾದನೆ, ಜೋಡಣೆ, ಸಗಟು ವ್ಯಾಪಾರ, ಮತ್ತು ಅದರ ಬಿಡಿಭಾಗಗಳ ವಿತರಣೆಯ ವ್ಯವಹಾರದಲ್ಲಿ ತೊಡಗಿಸಿಕೊಂಡಿದೆ. ಒಪ್ಪೋ ಇಂಡಿಯಾವು ತನ್ನದೇ ಹೆಸರಿನ ಒಪ್ಪೋ ಬ್ರ್ಯಾಂಡ್ ಮಾತ್ರವಲ್ಲದೆ, ಒನ್‌ಪ್ಲಸ್, ರಿಯಲ್‌ಮಿ ಸೇರಿದಂತೆ ವಿವಿಧ ಬ್ರ್ಯಾಂಡ್‌ನ ಮೊಬೈಲ್ ಫೋನ್‌ಗಳ ವ್ಯವಹಾರ ನಡೆಸುತ್ತದೆ.
