ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಬಾರಕೂರು ಗ್ರಾಮಪಂಚಾಯತಿ ಬಳಿಯ ಗಣಪತಿ ನಾಯಕ್ ಎನ್ನುವವರ ಮನೆಯ ಮೇಲೆ ಕಳೆದ ವಾರ ಸುರಿದ ಭಾರೀ ಗಾಳಿ ಮಳೆಗೆ ಬೃಹತ್ ಗಾತ್ರದ 150 ವರ್ಷದ ಹಳೆಯ ಮರವೊಂದು ಬಿದ್ದು ಒಂದು ವಾರ ಕಳೆದರೂ ಇನ್ನೂ ಕೂಡಾ ತೆರವು ಕಾರ್ಯ ಆಗದೆ ಕುಟುಂಬವೊಂದು ತೀರಾ ಅತಂಕದಲ್ಲಿದೆ.

ಬಾರಕೂರು ಗ್ರಾಮ ಪಂಚಾಯತಿ ಹಿಂಭಾಗದಲ್ಲಿರುವ ಹೆಂಚಿನ ಮನೆಯ ಒಂದು ಭಾಗದ ಮೇಲೆ ಇನ್ನೊಬ್ಬರ ಜಾಗದಲ್ಲಿರುವ ಮರ ಬೀಳುವಾಗ ಗಣಪತಿ ನಾಯಕ್‌ರ ಮನೆಯ ಎದುರು ಭಾಗದಲ್ಲಿರುವ ತೆಂಗಿನ ಮರ ತುಂಡಾಗಿ ಮನೆಯು ಭಾಗಶ: ಮುರಿದು ಬಿದ್ದಿದೆ.
ಅಡುಗೆ ಮನೆಯ ಮೇಲೆ ಮರ ಬಿದ್ದ ರಭಸಕ್ಕೆ ಪಕ್ಕಾಸು ರೀಪುಗಳು ತುಂಡಾಗಿ ಜೋಲಾಡುತ್ತಿದೆ. ಮರ ಬಿದ್ದ ದಿನವೇ ಇಲ್ಲಿನ ಗ್ರಾಮ ಲೆಕ್ಕಿಗರು ಬಂದು ಪರಿಶೀಲನೆ ಮಾಡಿ ಹಾನಿಯ ವರದಿ ಮಾಡಿದ್ದಾರೆ.

ವಯಸ್ಕರು ಮಾತ್ರ ಇರುವ ಈ ಮನೆಯಲ್ಲಿ ಒಂದು ವಾರ ಕಳೆದರೂ ಯಾರೂ ಬಾರದ ಕಾರಣ ಮಂಗಳೂರಿನಲ್ಲಿದ್ದ ದೇವರಾಯ ನಾಯಕ್ ಬ್ರಹ್ಮಾವರ ತಹಶೀಲ್ದಾರ , ಪೋಲೀಸ್ ಠಾಣೆ, ಅರಣ್ಯ ಇಲಾಖೆಗೆ ಲಿಖಿತ ದೂರು ನೀಡಿದ್ದಾರೆ.

ಒಂದು ವಾರದಿಂದ ಬಂದ ಮಳೆಯ ನೀರು ಬಿದ್ದು ಗೋಡೆ ಕುಸಿದು ಬೀಳುವ ಹಂತದಲ್ಲಿದೆ. ಆದರೆ ಮರವನ್ನು ತೆರವು ಮಾಡಲು ಮಾತ್ರ ಯಾವ ಇಲಾಖೆ ಕೂಡಾ ಬಂದಿಲ್ಲ ಎನ್ನುವುದು ಇವರ ಕೊರಗು. ಕುಟುಂಬಿಕರ ನಂಬಿಕೆಯ ಕುಲ ದೇವರ ಮನೆ ಇದಾಗಿದ್ದು, ಮನೆ ಮಂದಿ ಇದೀಗ ಬೇರೆಯವರ ಮನೆಗೆ ಹೋಗ ಬೇಕಾಗಿದ್ದು, ಸರಕಾರ ಮತ್ತು ಆಡಳಿತ ಇಲಾಖೆ ಜನಪ್ರತಿನಿಧಿಗಳು ಕೂಡಲೇ ಸ್ಪಂದಿಸ ಬೇಕಾಗಿದೆ.





































