ಬೆಂಗಳೂರು: ಒಂದನೇ ತರಗತಿಗೆ ದಾಖಲು ಮಾಡಲು ಕನಿಷ್ಠ ವಯೋಮಿತಿಯನ್ನು 5.5 ವರ್ಷಗಳ ಬದಲು ಜೂನ್ 1 ಕ್ಕೆ ಕಡ್ಡಾಯವಾಗಿ 6 ವರ್ಷಗಳು ಪೂರ್ಣಗೊಂಡಿರಬೇಕೆಂದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಪರಿಷ್ಕೃತ ಆದೇಶ ಹೊರಡಿಸಿದೆ.
ಈ ಕುರಿತು ನಡವಳಿಯನ್ನು ಹೊರಡಿಸಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ, ದಿನಾಂಕ 20-03-2020ರಂದು ಹೊರಡಿಸಿದ್ದಂತ ಆದೇಶವನ್ನು ಹಿಂಪಡೆಯಲಾಗಿದೆ. ಆರ್ ಟಿ ಇ ಕಾಯ್ದೆ 2009 ಮತ್ತು ಕಡ್ಡಾಯ ಶಿಕ್ಷಣ ನಿಯಮಗಳು 2012 ರಂತೆ ಶೈಕ್ಷಣಿಕ ವರ್ಷದ ಜೂನ್ 1ನೇ ತಾರೀಖಿಗೆ ಕಡ್ಡಾಯವಾಗಿ 6 ವರ್ಷಗಳು ಪೂರ್ಣಗೊಂಡಿರುವ ಮಗುವನ್ನು ಒಂದನೇ ತರಗತಿಗೆ ದಾಖಲಿಸಲು ವಯೋಮಿತಿಯನ್ನು ನಿಗದಿಪಡಿಸಲಾಗಿದೆ ಎಂದು ಹೇಳಿದ್ದಾರೆ.
ಅಂದಹಾಗೇ ಈ ಮೊದಲು ಎಲ್ ಕೆಜಿ, ಯುಕೆಜಿ ಬಳಿಕ ಒಂದನೇ ತರಗತಿಗಾಗಿ ಶಾಲೆಗೆ ದಾಖಲಾಗುವುದಕ್ಕಾಗಿ 5.5 ವರ್ಷ ತುಂಬಿರೋದು ಕಡ್ಡಾಯವಾಗಿತ್ತು. ಶೈಕ್ಷಣಿಕ ವರ್ಷ ಜೂನ್ 01 ಆರಂಭಕ್ಕೆ ಸರಿಯಾಗಿ 1ನೇ ತರಗತಿಗೆ ದಾಖಿಸಲು ಇದು ಕಡ್ಡಾಯವಾಗಿತ್ತು. ಇದೀಗ ಈ ವಯೋಮಿತಿಯನ್ನು ಬದಲಾವಣೆ ಮಾಡಲಾಗಿದ್ದು, ಇನ್ಮುಂದೆ ಒಂದನೇ ತರಗತಿಗೆ ದಾಖಲಾಗಲು ಮಗುವಿನ ವಯಸ್ಸು ಕಡ್ಡಾಯವಾಗಿ 6 ವರ್ಷ ತುಂಬಿರಬೇಕಾಗಿದೆ ಎಂದು ತಿಳಿಸಿದ್ದಾರೆ.


































