ವರದಿ : ಶ್ರೀದತ್ತ ಹೆಬ್ರಿ
ಹೆಬ್ರಿ : ಹೆಬ್ರಿಯ ನಕ್ಸಲ್ ನಿಗ್ರಹ ಪಡೆಯ ಸಿಬ್ಬಂದಿಗಳು ಒಟ್ಟಾಗಿ ಗುಡಿಸಿನಲ್ಲಿ ಅಸಹಾಯಕ ಸ್ಥಿತಿಯಲ್ಲಿ ವಾಸವಾಗಿದ್ದನು ಗಮನಿಸಿ, ಸ್ವಾತಂತ್ರದ ಅಮೃತ ಮಹೋತ್ಸವದ ಅಂಗವಾಗಿ ಅಮೃತ ನಿವಾಸ ಎಂಬ ಮನೆಯನ್ನು ಸಿಬ್ಬಂದಿಗಳೇ ಹಣವನ್ನು ಒಟ್ಟುಗೂಡಿಸಿ ನಿರ್ಮಾಣ ಮಾಡಿರುವುದು ಅವರ ಸಾಮಾಜಿಕ ಬದ್ಧತೆಯನ್ನು ಎತ್ತಿತೋರಿಸುತ್ತದೆ. ವೃದ್ಧನ ಅಸಹಾಯಕತೆಗೆ ಮಾನವೀಯತೆ ಮೆರೆದ ಎಲ್ಲ ಸಿಬ್ಬಂದಿವರ್ಗದ ಸಾಮಾಜಿಕ ಕಳಕಳಿಯನ್ನು ಅಭಿನಂದಿಸುತ್ತೇನೆ ನಿಂದು ನಕ್ಸಲ್ ನಿಗ್ರಹ ಪಡೆಯ ಪೊಲೀಸ್ ಅಧೀಕ್ಷಕ ಪ್ರಕಾಶ್ ಅಮ್ರಿತ್ ನಿಕಮ್ ಹೇಳಿದರು.
ಅವರು ನಾಡ್ಪಾಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೆಂಗುಮಾರ್ ಎಂಬಲ್ಲಿ ನಾರಾಯಣಗೌಡ ಎಂಬುವರಿಗೆ ಹೆಬ್ರಿಯ ನಕ್ಸಲ್ ನಿಗ್ರಹ ಪಡೆಯ ಸಿಬ್ಬಂದಿಗಳು ಸುಮಾರು 55 ಸಾವಿರ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿದ ಮನೆಯ ಕೀಲಿಯನ್ನು ಹಸ್ತಾಂತರಿಸಿ ಮಾತನಾಡುತ್ತಿದ್ದರು.

ಸಾಹಸಮಯ ವಾಗಿ ಮನೆ ಕಟ್ಟಲು ಬೇಕಾಗುವಂತಹ ಸಾಮಗ್ರಿಗಳು ಹೊತ್ತುಕೊಂಡು ಬಂದಿರುವುದು ಸಿಬ್ಬಂದಿಗಳ ಕಾರ್ಯಕ್ಷಮತೆಯನ್ನು ತೋರಿಸುತ್ತದೆ. ಇನ್ಸ್ಪೆಕ್ಟರ್ ಸತೀಶ ಬಿಎಸ್ ಅವರ ತಂಡ ಉತ್ತಮವಾಗಿ ಕೆಲಸ ಮಾಡಿ ಮನೆ ನಿರ್ಮಾಣ ಮಾಡಿದ್ದು ಖುಷಿ ತಂದಿದೆ ಎಂದು ಪೊಲೀಸ್ ಅಧೀಕ್ಷಕ ಅಭಿನಂದಿಸಿದರು.

ನಕ್ಸಲರು ಸಮಾಜದ ಮುಖ್ಯವಾಹಿನಿಗೆ ಬರಬೇಕು. ನಕ್ಸಲ್ ಪ್ಯಾಕೇಜ್ ನಲ್ಲಿ ಸಿಗುವ ಎಲ್ಲಾ ಸವಲತ್ತುಗಳನ್ನು ಒದಗಿಸಲಾಗುವುದು. ಒಟ್ಟು ಎಂಟು ಜನ ನಕ್ಸಲರು ಇನ್ನೂ ಸಕ್ರಿಯವಾಗಿದ್ದು ಅವರೆಲ್ಲರೂ ವಯನಾಡು ಭಾಗದಲ್ಲಿ ಇರುವ ಕುರಿತು ಪೊಲೀಸ್ ಅಧೀಕ್ಷಕ ಪ್ರಕಾಶ್ ಅಮ್ರಿತ್ ನಿಕಮ್ ಮಾಹಿತಿ ನೀಡಿದರು.

ನಕ್ಸಲ್ ನಿಗ್ರಹ ಪಡೆಯ ಇನ್ಸ್ಪೆಕ್ಟರ್ ಸತೀಶ್ ಬಿಎಸ್ ಮಾತನಾಡಿ ನಾರಾಯಣಗೌಡರ ಅಸಹಾಯಕ ಪರಿಸ್ಥಿತಿಯನ್ನು ಗಮನಿಸಿ ನಮ್ಮೆಲ್ಲ ಸಿಬ್ಬಂದಿಗಳೊಂದಿಗೆ ಸಮಾಲೋಚನೆ ನಡೆಸಿ ಮನೆ ನಿರ್ಮಿಸಿಕೊಡುವ ಬಗ್ಗೆ ಪ್ರಸ್ತಾಪಿಸಿದಾಗ ಎಲ್ಲರೂ ಒಪ್ಪಿ ಮನೆ ನಿರ್ಮಾಣ ಕೆಲಸಕ್ಕೆ ಮುಂದಾಗಿದ್ದೇವೆ. ಈ ಸಾಹಸಮಯವಾದ ಮನೆ ನಿರ್ಮಾಣ ಕೆಲಸಕ್ಕೆ ಸ್ಥಳೀಯರು ಕೂಡ ಸಹಕಾರ ನೀಡುತ್ತಾರೆ. ಮನೆ ನಿರ್ಮಾಣದ ನಂತರ ನಾರಾಯಣಗೌಡರ ಆನಂದವನ್ನು ಗಮನಿಸಿ ಮಾಡಿದ ಕೆಲಸ ತೃಪ್ತಿದಾಯಕವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಇನ್ಸ್ಪೆಕ್ಟರ್ ಸತೀಶ್ ಬಿಎಸ್, ಪಿಎಸ್ಐ ಗಳಾದ ಸುದರ್ಶನ್ ದೊಡ್ಡಮನಿ, ವೀರೇಶ, ವಸಂತ, ಸಿಬ್ಬಂದಿಗಳಾದ ರಾಘವೇಂದ್ರ ಕಾಂಚನ್, ಗಣಪತಿ, ತಳವಾರ್ ಹಾಗೂ ಹೆಬ್ರಿ ನಕ್ಸಲ್ ನಿಗ್ರಹ ಪಡೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.


































