ಉಡುಪಿ : ಮನೆಯ ಒಳಗೆ ಅಕ್ರಮವಾಗಿ ಪ್ರವೇಶಿಸಿ, ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ನಗದನ್ನು ಕಳವು ಮಾಡಿರುವ ಆರೋಪಿಗಳಿಗೆ ನಗರದ ಹೆಚ್ಚುವರಿ ಸಿ.ಜೆ ಮತ್ತು ಎ.ಸಿ.ಜೆ.ಎಂ ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ.
2015 ರ ಡಿಸೆಂಬರ್ 26 ರಂದು ರಾತ್ರಿ 2.30 ರ ಸುಮಾರಿಗೆ ಅಬ್ದುಲ್ ಖಾದರ್ ಅಲಿಯಾಸ್ ಎ.ಬಿ.ಅಬೂಬಕ್ಕರ್ ಹಾಗೂ ಅಜೀಜ್ ಅಲಿಯಾಸ್ ಬೊಂಡಾ ಅಜೀಜ್ ಎನ್ನುವವರು ಎಲ್ಲೂರು ಗ್ರಾಮದ ಅದಮಾರು ಎಂಬಲ್ಲಿನ ಪಿ. ಜನಾರ್ಧನ ರಾವ್ ಎನ್ನುವವರ ಮನೆಯ ಬಾಗಿಲಿನ ಚಿಲಕವನ್ನು ತೆಗೆದು, ಅಕ್ರಮವಾಗಿ ಮನೆಯ ಒಳಗೆ ಪ್ರವೇಶಿಸಿ, ಬೆಡ್ ರೋಂನ ಕಪಾಟಿನಲ್ಲಿದ್ದ ಚಿನ್ನಾಭರಣ ಹಾಗೂ ನಗದನ್ನು ಕಳವು ಮಾಡಿರುವ ಹಿನ್ನೆಲೆ, ಪಡುಬಿದ್ರೆ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿಗಳ ವಿರುದ್ಧ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆದು, ಆರೋಪ ಸಾಬೀತಾದ ಹಿನ್ನೆಲೆ, ನಗರದ ಹೆಚ್ಚುವರಿ ಸಿ.ಜೆ ಮತ್ತು ಎ.ಸಿ.ಜೆ.ಎಂ ನ್ಯಾಯಾಲಯದ ನ್ಯಾಯಾಧೀಶ ಪಿ.ಆರ್ ಯೋಗೀಶ್ ಅವರು ಇಬ್ಬರೂ ಆರೋಪಿಗಳಿಗೆ 2 ತಿಂಗಳುಗಳ ಕಾಲ ಜೈಲು ಶಿಕ್ಷೆ ಹಾಗೂ ಒಟ್ಟು 40,000 ರೂ. ದಂಡ ವಿಧಿಸಿ, ತೀರ್ಪು ನೀಡಿರುತ್ತಾರೆ.
ಸರ್ಕಾರದ ಪರವಾಗಿ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕ ಬದರೀನಾಥ್ ನಾಯರಿ ವಾದ ಮಂಡಿಸಿರುತ್ತಾರೆ.



































