ಪುಣೆ : ಖಾಸಗಿ ವಿಮಾನಯಾನ ಅಕಾಡೆಮಿಗೆ ಸೇರಿದ ತರಬೇತಿ ವಿಮಾನವು ಮಹಾರಾಷ್ಟ್ರದ ಪುಣೆ ಜಿಲ್ಲೆಯ ಹಳ್ಳಿಯೊಂದರ ಬಳಿ ಭಾನುವಾರ ಬೆಳಗ್ಗೆ ಪತನಗೊಂಡಿದೆ. ಪರಿಣಾಮ ವಿಮಾನದಲ್ಲಿದ್ದ ತರಬೇತಿ ಪೈಲಟ್ ಮತ್ತು ಬೋಧಕ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಬಾರಾಮತಿ ತಾಲೂಕಿನ ಗೋಜುಬಾವಿ ಗ್ರಾಮದ ಬಳಿ ಬೆಳಗ್ಗೆ 8 ಗಂಟೆ ಸುಮಾರಿಗೆ ವಿಮಾನ ಪತನಗೊಂಡಿದೆ.
ರೆಡ್ ಬರ್ಡ್ ಫ್ಲೈಟ್ ಟ್ರೈನಿಂಗ್ ಅಕಾಡೆಮಿಗೆ ಸೇರಿದ ತರಬೇತಿ ವಿಮಾನವು ಗೊಜುಬಾವಿ ಗ್ರಾಮದ ಬಳಿ ಅಪಘಾತಕ್ಕೀಡಾಗಿದೆ. ಅಪಘಾತದಲ್ಲಿ ತರಬೇತಿ ಪಡೆದ ಪೈಲಟ್ ಮತ್ತು ಬೋಧಕ ಗಾಯಗೊಂಡಿದ್ದಾರೆ. ಇಬ್ಬರನ್ನೂ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಬಾರಾಮತಿ ಪೊಲೀಸ್ ಠಾಣೆಯ ಹಿರಿಯ ಇನ್ಸ್ಪೆಕ್ಟರ್ ಪ್ರಭಾಕರ್ ಮೋರೆ ತಿಳಿಸಿದ್ದಾರೆ.

ಅಪಘಾತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ಘಟನೆಯ ಕುರಿತು ನಾವು ತನಿಖೆ ನಡೆಸುತ್ತಿದ್ದೇವೆ ಎಂದು ಅವರು ಹೇಳಿದರು.
ನಾಲ್ಕು ದಿನಗಳಲ್ಲಿ ಖಾಸಗಿ ವಿಮಾನಯಾನ ಅಕಾಡೆಮಿಯ ವಿಮಾನ ಪತನದಲ್ಲಿ ಇದು ಎರಡನೇ ಘಟನೆಯಾಗಿದೆ.
ಗುರುವಾರ ಸಂಜೆ, ಅಕಾಡೆಮಿಯ ತರಬೇತಿ ವಿಮಾನವು ಬಾರಾಮತಿ ತಾಲೂಕಿನ ಕಫ್ತಾಲ್ ಗ್ರಾಮದ ಬಳಿ ಪತನಗೊಂಡಿದೆ. ಪೈಲಟ್ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
