ಕೇರಳ : ಕಲಮಸ್ಸೆರಿಯಲ್ಲಿರುವ ಕನ್ವೆನ್ಷನ್ ಸೆಂಟರ್ನಲ್ಲಿ ಭಾರೀ ಸ್ಫೋಟದ ಬೆನ್ನಲ್ಲೇ ದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ದೆಹಲಿ ಪೊಲೀಸರು ರಾಷ್ಟ್ರ ರಾಜಧಾನಿಯಲ್ಲಿ ಭದ್ರತಾ ಕ್ರಮಗಳನ್ನು ಹೆಚ್ಚಿಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಜನದಟ್ಟಣೆಯ ಪ್ರದೇಶಗಳಲ್ಲಿ ಅಧಿಕಾರಿಗಳು ಪೊಲೀಸರ ಭದ್ರತೆಯನ್ನು ಹೆಚ್ಚಿಸಿದ್ದಾರೆ.
ದೆಹಲಿ ಅಲ್ಲದೇ ತಮಿಳುನಾಡು, ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಪೊಲೀಸರು ಹೈ ಅಲರ್ಟ್ ಘೋಷಿಸಿದ್ದಾರೆ.
ಕರ್ನಾಟಕದಲ್ಲಿನ ಜನ ನಿಬಿಡ ಪ್ರದೇಶಗಳಲ್ಲಿ ಕಟ್ಟೆಚ್ಚರ ಹಾಗೂ ಸೂಕ್ತ ಬಿಗಿ ಪೊಲೀಸ್ ಭದ್ರತೆಯನ್ನು ಕೈಗೊಳ್ಳುವಂತೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಸೂಚಿಸಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಸರಾ ಸಂದರ್ಭದಲ್ಲಿ ಮೈಸೂರು, ಕೊಡಗು ಮಂಗಳೂರಿನಲ್ಲಿ ಬೆದರಿಕೆ ಹಿನ್ನೆಲೆಯಲ್ಲಿ ಈ ಮೂರೂ ಕಡೆಗಳಲ್ಲಿ ಭದ್ರತೆ ಹೆಚ್ಚಿಸಲಾಗಿತ್ತು. ಅದಕ್ಕೆ ಏನು ಕ್ರಮ ಕೈಗೊಳ್ಳಬೇಕಿತ್ತೋ ಅದನ್ನು ತೆಗೆದುಕೊಂಡಿದ್ದೇವೆ ಎಂದರು.
ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಪೊಲೀಸರು ಕೇರಳ ಸರಣಿ ಸ್ಪೋಟದ ನಂತ್ರ ಮುನ್ನೆಚ್ಚರಿಕೆ ಕ್ರಮವಾಗಿ ಹದ್ದಿನ ಕಣ್ಣು ನೆಟ್ಟಿದ್ದಾರೆ. ಕರ್ನಾಟಕದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಬಿಗಿ ಪೊಲೀಸ್ ಭದ್ರತೆಯನ್ನು ಕೂಡ ಹೆಚ್ಚಿಸಿದ್ದಾರೆ ಎನ್ನಲಾಗುತ್ತಿದೆ.
ಮತ್ತೊಂದೆಡೆ ಮಹಾರಾಷ್ಟ್ರದ ಅಧಿಕಾರಿಗಳು ಭದ್ರತಾ ವ್ಯವಸ್ಥೆಗಳನ್ನು ಹೆಚ್ಚಿಸಿದ್ದಾರೆ. ಮುಂಬೈ ಮತ್ತು ಇತರ ಸ್ಥಳಗಳಲ್ಲಿ ಜನನಿಬಿಡ ಸ್ಥಳಗಳಲ್ಲಿ ಅವುಗಳನ್ನು ಜಾರಿಗೆ ತಂದಿದ್ದಾರೆ. ತಮಿಳುನಾಡಿನ ಗಡಿ ಜಿಲ್ಲೆಗಳಲ್ಲಿ ತೀವ್ರ ಕಣ್ಗಾವಲು ನಡೆಸುವಂತೆ ಡಿಜಿಪಿ ಶಂಕರ್ ಜಿವಾಲ್ ಆದೇಶಿಸಿದ್ದಾರೆ.

