ಟೆಲ್ ಅವೀವ್: ಗಾಜಾದಲ್ಲಿ ಕತಾರ್ ಅನುದಾನಿತ ವೈದ್ಯಕೀಯ ಕೇಂದ್ರವನ್ನು ಭಯೋತ್ಪಾದಕ ಯುದ್ಧವನ್ನು ಮುಂದುವರಿಸುವುದಕ್ಕಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಈ ಬಗ್ಗೆ ಇಸ್ರೇಲ್ ಸಾಕ್ಷ್ಯ ಹಾಜರುಪಡಿಸಿದೆ.
ಐಡಿಎಫ್ ನ ವಕ್ತಾರ ರಿಯರ್ ಅಡ್ಮ್ ಈ ಕುರಿತು ಮಾಹಿತಿ ನೀಡಿದ್ದು, ಗಾಜಾ ನಗರದ ಉತ್ತರದ ಕರಾವಳಿ ಪ್ರದೇಶದಲ್ಲಿರುವ ಶೇಖ್ ಹಮದ್ ಬಿನ್ ಖಲೀಫಾ ಅಲ್ ಥಾಣಿ ಆಸ್ಪತ್ರೆಯಲ್ಲಿ ಇಸ್ರೇಲಿ ಯೋಧರು ಭಯೋತ್ಪಾದಕ ಟನಲ್ ಪ್ರವೇಶ ದ್ವಾರವನ್ನು ಪತ್ತೆ ಮಾಡಿದ್ದಾರೆಂದು ಹೇಳಿದ್ದಾರೆ.
ಅಲ್ಲದೇ ಹಮಾಸ್ ಉಗ್ರರು ಇಸ್ರೇಲ್ ಯೋಧರೆಡೆಗೆ ಆಸ್ಪತ್ರೆಯೊಳಗಿನಿಂದ ಗುಂಡು ಹಾರಿಸುತ್ತಿರುವ ವೀಡಿಯೋವನ್ನೂ ಇಸ್ರೇಲಿ ಡಿಫೆನ್ಸ್ ಫೋರ್ಸ್ (ಐಡಿಎಫ್) ನ ವಕ್ತಾರ ಡೆನಿಯಲ್ ಹಗರಿ ಬಿಡುಗಡೆ ಮಾಡಿದ್ದಾರೆ.

ಕತಾರ್ನ ಮಾಜಿ ಎಮಿರ್ ಅವರ ಸ್ಮರಣಾರ್ಥ ಗಾಜಾದಲ್ಲಿ ಈ ಆಸ್ಪತ್ರೆಯನ್ನು 2016 ರಲ್ಲಿ ಸ್ಥಾಪಿಸಲಾಗಿತ್ತು. ಇದಷ್ಟೇ ಅಲ್ಲದೇ ಇಂಡೋನೇಶ್ಯಾದ ಎನ್ ಜಿಒಗಳಿಂದ ನೆರವು ಪಡೆದು ಬೀಟ್ ಲಾಹಿಯಾದಲ್ಲಿ 2016 ರಲ್ಲಿ ನಿರ್ಮಿಸಲಾಗಿದ್ದ ಇಂಡೋನೇಷ್ಯನ್ ಆಸ್ಪತ್ರೆಯ ಅಡಿಯಲ್ಲಿಯೂ ಹಮಾಸ್ ನ ಉಗ್ರ ಮೂಲಸೌಕರ್ಯ ಇರುವುದನ್ನು ಇಸ್ರೇಲ್ ಬಹಿರಂಗಪಡಿಸಿದೆ.
ಆಸ್ಪತ್ರೆಗಳು ನಿರ್ಮಾಣವಾಗುವುದಕ್ಕೂ ಮುನ್ನ ಅದರ ಅಡಿಭಾಗದಲ್ಲಿ ಉಗ್ರರ ಮೂಲಸೌಕರ್ಯಗಳಿತ್ತು ಎಂದು ಐಡಿಎಫ್ ಹೇಳಿದ್ದು, ಆಸ್ಪತ್ರೆಯಿಂದ 245 ಅಡಿ (75 ಮೀಟರ್) ದೂರದಲ್ಲಿ ರಾಕೆಟ್ ಲಾಂಚ್ ಪ್ಯಾಡ್ ಇರುವುದನ್ನೂ ಐಡಿಎಫ್ ವಕ್ತಾರರು ಬಹಿರಂಗಪಡಿಸಿದ್ದಾರೆ.


































