ಚಿಕ್ಕಮಗಳೂರು: ಕಾಡಾನೆಯೊಂದು ತುಳಿದ ಪರಿಣಾಮ ಮಹಿಳೆಯೊಬ್ಬರು ಸಾವಿಗೀಡಾಗಿರುವ ಘಟನೆ ಹೆಡದಾಳು ಗ್ರಾಮದಲ್ಲಿ ಬುಧವಾರ ನಡೆದಿದೆ. ಮೀನಾ(45) ಮೃತ ಮಹಿಳೆ.
ಇನ್ನಿಬ್ಬರು ಕಾರ್ಮಿಕರ ಮೇಲೂ ಆನೆ ದಾಳಿ ಮಾಡಿದ್ದು, ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಅವರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.
ಗಾಯಾಳುಗಳನ್ನು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮೀನಾ ಮತ್ತು ಇತರರು ತಮ್ಮ ಮನೆಯಿಂದ ಜಮೀನಿನ ಕಡೆಗೆ ಹೋಗುತ್ತಿದ್ದಾಗ ಕಾಡಾನೆ ದಾಳಿ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೀನಾ ತಪ್ಪಿಸಿಕೊಳ್ಳಲು ಯತ್ನಿಸಿದರಾದರೂ, ಈ ವೇಳೆ ಆಕೆಯ ತಲೆಯ ಮೇಲೆ ಆನೆ ಕಾಲಿಟ್ಟಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಲ್ದೂರು ಅರಣ್ಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ.
ಏಳು ಆನೆಗಳ ಹಿಂಡು ಗ್ರಾಮದ ಸಮೀಪದಲ್ಲಿಯೇ ಬೀಡುಬಿಟ್ಟಿದ್ದು, ಅವುಗಳನ್ನು ಕೂಡಲೇ ಕಾಡಿಗೆ ಓಡಿಸಬೇಕು. ತಾವು ಜೀವವನ್ನು ಕೈಯಲ್ಲಿಡಿದು ಓಡಾಡುವಂತ ಪರಿಸ್ಥಿತಿ ಎದುರಾಗಿದೆ. ತಮ್ಮ ಜೀವಕ್ಕೆ ರಕ್ಷಣೆ ನೀಡಬೇಕು ಎಂದು ಗ್ರಾಮಸ್ಥರು ಅರಣ್ಯಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಒಂಟಿ ಆನೆಯೊಂದು ಕಳೆದ ತಿಂಗಳಿನಿಂದ ಹಿಂಡಿನಿಂದ ಬೇರ್ಪಟ್ಟು, ಜನವಸತಿ ಪ್ರದೇಶಗಳು ಮತ್ತು ಕೃಷಿ ಭೂಮಿಗಳಲ್ಲಿ ವಿಹರಿಸುತ್ತಾ ಜನರ ಜೀವಕ್ಕೆ ಗಂಭೀರ ಅಪಾಯವನ್ನುಂಟುಮಾಡಿದೆ. ತಿಂಗಳ ಹಿಂದೆಯೇ ಈ ಬಗ್ಗೆ ಮನವಿ ಸಲ್ಲಿಸಿದ್ದರೂ ಅರಣ್ಯಾಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.



































