ಚಂದನವನ : ಹಿರಿಯ ನಟಿ ಲೀಲಾವತಿಯವರ ಆರೋಗ್ಯ ಬಹಳ ಕ್ಷೀಣಿಸಿದೆ. ಅವರು ಹಾಸಿಗೆ ಬಿಟ್ಟು ಏಳಲಾರದ ಪರಿಸ್ಥಿತಿಯಲ್ಲಿದ್ದಾರೆ. ಹೀಗಾಗಿ ಚಿತ್ರರಂಗದ ಹಲವು ನಟ-ನಟಿಯರು ಅವರ ಕಂಡು ಆರೋಗ್ಯ ವಿಚಾರಿಸುತ್ತಿದ್ದಾರೆ. ಇತ್ತೀಚೆಗಷ್ಟೆ ನಟ ಅರ್ಜುನ್ ಸರ್ಜಾ, ಭೇಟಿ ನೀಡಿದ್ದರು.
ಇಂದು (ನವೆಂಬರ್ 26) ನಟ ದರ್ಶನ್ ಲೀಲಾವತಿಯವರನ್ನು ನೋಡಲು ಬಂದಿದ್ದರು.
ನೆಲಮಂಗಲದ ಸೋಲದೇವನಹಳ್ಳಿಯ ಲೀಲಾವತಿ ಹಾಗೂ ವಿನೋದ್ ರಾಜ್ ಅವರ ನಿವಾಸಕ್ಕೆ ಭೇಟಿ ನೀಡಿದ ನಟ ದರ್ಶನ್ ಅವರನ್ನು ತೋರಿಸಿ, ಅಮ್ಮ ನೋಡಿಲ್ಲಿ ನಿನ್ನನ್ನು ನೋಡಲು ಯಾರು ಬಂದಿದ್ದಾರೆ.. ದರ್ಶನ್ ಬಂದಿದಾನಮ್ಮ… ಎದ್ದೇಳು.. ಇಲ್ನೋಡಮ್ಮ ಎಂದಿದ್ದಾರೆ ವಿನೋದ್.

ದರ್ಶನ್ ಹಾಸಿಗೆ ಮೇಲೆ ಮಲಗಿದ್ದ ಲೀಲಾವತಿಯವರನ್ನು ಕಂಡು ಮಾತನಾಡಿಸಲು ಪ್ರಯತ್ನಿಸಿದರು. ಅಮ್ಮ ನಾನು ದರ್ಶನ್ ಬಂದಿದ್ದೀನಿ ಎಂದು ಅಕ್ಕರೆಯಿಂದ ಮಾತನಾಡಿದರು. ಆದರೆ ಅವರಿಗೆ ಪ್ರತಿಕ್ರಿಯೆ ನೀಡುವಷ್ಟು ದೇಹದಲ್ಲಿ ತ್ರಾಣವಿಲ್ಲ. ‘ಎಲ್ಲರನ್ನೂ ಗುರುತು ಹಿಡೀತಾರೆ ಆದರೆ ಮಾತನಾಡಲು ಆಗುತ್ತಿಲ್ಲ’ ಎಂದು ವಿನೋದ್ ರಾಜ್ ಹೇಳಿದರು.
ವಿನೋದ್ ರಾಜ್ ಅವರು ಸೋಲದೇವನಹಳ್ಳಿಯಲ್ಲಿ ಪಶು ವೈದ್ಯಕೀಯ ಆಸ್ಪತ್ರೆಯೊಂದನ್ನು ನಿರ್ಮಾಣ ಮಾಡಿದ್ದಾರೆ. ನಿನ್ನೆ (ನವೆಂಬರ್ 25) ಆ ಆಸ್ಪತ್ರೆಯಲ್ಲಿ ಹೋಮ ಹವನಗಳನ್ನು ನೆರವೇರಿಸಿದ್ದಾರೆ. ಇಂದು (ನವೆಂಬರ್ 26) ನಟ ದರ್ಶನ್ ಸಹ ಆಸ್ಪತ್ರೆ ಉದ್ಘಾಟನೆ ಕಾರ್ಯಕ್ರಮಕ್ಕೆ ಭೇಟಿ ನೀಡಿದ್ದರು. ವಿನೋದ್ ರಾಜ್ ಜೊತೆ ಕೆಲ ಕಾಲ ಮಾತನಾಡಿ ಬಳಿಕ ಲೀಲಾವತಿ ಅವರ ಆರೋಗ್ಯ ವಿಚಾರಿಸಿ ತೆರಳಿದರು.


































