ರಾಯ್ಪುರ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 4ನೇ ಟಿ20 ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಆದರೆ, ಪಂದ್ಯ ನಡೆಯಬೇಕಿದ್ದ ರಾಯ್ಪುರ ಕ್ರೀಡಾಂಗಣಕ್ಕೆ ವಿದ್ಯುತ್ ಕಡಿತ ಮಾಡಲಾಗಿದೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಟಿ20 ಅಂತಾರಾಷ್ಟ್ರೀಯ ಪಂದ್ಯ ಇಂದು ರಾಯ್ಪುರದ ಶಹೀದ್ ವೀರ್ ನಾರಾಯಣ ಸಿಂಗ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈಗಾಗಲೇ ರಾಯ್ಪುರಕ್ಕೆ ಆಗಮಿಸಿರುವ ಉಭಯ ತಂಡಗಳು ಮೈದಾನದಲ್ಲಿ ಅಭ್ಯಾಸ ನಡೆಸುತ್ತಿವೆ. ಆದರೆ ಪಂದ್ಯ ಆರಂಭಕ್ಕೆ ಇನ್ನು ಕೆಲವೇ ಗಂಟೆಗಳು ಬಾಕಿ ಇರುವಂತೆಯೇ ಛತ್ತೀಸ್ಗಢ ವಿದ್ಯುತ್ ಇಲಾಖೆ ಶಾಕ್ ನೀಡಿದೆ. ಮೈದಾನಕ್ಕೆ ನೀಡಲಾಗುತ್ತಿದ್ದ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದೆ.
ಇನ್ನು ಕ್ರೀಡಾಂಗಣಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿರುವ ಹಿನ್ನಲೆಯಲ್ಲಿ ಮೈದಾನಕ್ಕೆ ಜನರೇಟರ್ ಅಳವಡಿಕೆ ಮಾಡಲಾಗಿದೆ. ಆದರೆ ಅದು ಪ್ರೇಕ್ಷಕರ ಗ್ಯಾಲರಿ ಮತ್ತು ಬಾಕ್ಸ್ಗಳನ್ನು ಮಾತ್ರ ಒಳಗೊಂಡಿದ್ದು, ಇಂದಿನ ಪಂದ್ಯದ ವೇಳೆ ಫ್ಲಡ್ಲೈಟ್ಗಳನ್ನು ಜನರೇಟರ್ ಬಳಸಿ ಓಡಿಸಬೇಕಾಗುತ್ತದೆ. ತಾತ್ಕಾಲಿಕವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿರುವುದು 200 ಕಿಲೋವ್ಯಾಟ್ಗೆ. ಇದನ್ನು 1,000 ಕಿಲೋವ್ಯಾಟ್ಗೆ ಏರಿಸಲು ಅನುಮತಿ ದೊರೆತಿದೆ. ಆದರೆ, ಇದುವರೆಗೆ ಈ ಕುರಿತ ಕೆಲಸ ಆರಂಭವಾಗಿಲ್ಲ. ಇದರಿಂದಾಗಿ ಕ್ರಿಕೆಟ್ ಪ್ರೇಮಿಗಳು ಅಸೋಸಿಯೇಷನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

2018ರಲ್ಲಿ ಅಥ್ಲೀಟ್ಗಳು ಹಾಫ್ ಮ್ಯಾರಥಾನ್ನಲ್ಲಿ ಪಾಲ್ಗೊಳ್ಳುವಾಗ ವಿದ್ಯುತ್ ಪೂರೈಕೆ ಇಲ್ಲದಿರುವ ಕುರಿತು ದೂರು ನೀಡಿದ್ದರು. ಇದಾದ ಬಳಿಕವೇ 3.16 ಕೋಟಿ ರೂ. ವಿದ್ಯುತ್ ಬಿಲ್ ಬಾಕಿ ಇರುವ ಪ್ರಕರಣ ಬಯಲಾಗಿದೆ. ಇದರ ಬಗ್ಗೆ ಕ್ರೀಡಾ ಇಲಾಖೆ ಹಾಗೂ ಪಿಡಬ್ಲ್ಯೂಡಿ ಇಲಾಖೆ ಅಧಿಕಾರಿಗಳು ಆರೋಪ-ಪ್ರತ್ಯಾರೋಪಗಳಲ್ಲಿಯೇ ನಿರತರಾಗಿದ್ದಾರೆಯೇ ಹೊರತು ಯಾವುದೇ ಕ್ರಮ ತೆಗೆದುಕೊಂಡಿಲ್ಲ.
ಸ್ಟೇಡಿಯಂನ ತಾತ್ಕಾಲಿಕ ಸಂಪರ್ಕದ ಸಾಮರ್ಥ್ಯವನ್ನು ಹೆಚ್ಚಿಸಲು ಕಾರ್ಯದರ್ಶಿ ಕ್ರಿಕೆಟ್ ಸಂಸ್ಥೆಯು ಅರ್ಜಿ ಸಲ್ಲಿಸಿದೆ ಎಂದು ರಾಯ್ಪುರ ಗ್ರಾಮಾಂತರ ವೃತ್ತದ ಉಸ್ತುವಾರಿ ಅಶೋಕ್ ಖಂಡೇಲ್ವಾಲ್ ಹೇಳಿದ್ದಾರೆ.
ಟಿ-20 ಸರಣಿಯಲ್ಲಿ ಭಾರತ ಕ್ರಿಕೆಟ್ ತಂಡವು 2-1ರ ಮುನ್ನಡೆ ಸಾಧಿಸಿದೆ. ಭಾರತ ತಂಡವು ಮೊದಲ ಎರಡು ಪಂದ್ಯಗಳನ್ನು ಗೆದ್ದು, ಗುವಾಹಟಿಯಲ್ಲಿ ನಡೆದ ಮೂರನೇ ಪಂದ್ಯದಲ್ಲಿ ಐದು ವಿಕೆಟ್ಗಳ ಅಂತರದಿಂದ ಸೋಲನುಭವಿಸಿದೆ. ಈಗ ನಾಲ್ಕನೇ ಪಂದ್ಯವನ್ನು ಗೆದ್ದು ಸರಣಿ ವಶಪಡಿಸಿಕೊಳ್ಳುವ ಉತ್ಸಾಹದಲ್ಲಿದೆ.


































