ನವದೆಹಲಿ : ವೆಸ್ಟ್ ಇಂಡೀಸ್ ಹಾಗೂ ಅಮೇರಿಕ ಜಂಟಿ ಆತಿಥ್ಯದಲ್ಲಿ ಆಯೋಜನೆಗೊಂಡಿರುವ 2024ರ ಟಿ20-ಐ ವಿಶ್ವಕಪ್ ಟೂರ್ನಿಯವರೆಗೂ ಟೀಮ್ ಇಂಡಿಯಾವನ್ನು ರೋಹಿತ್ ಶರ್ಮಾ ಅವರೇ ಮುನ್ನಡೆಸಬೇಕೆಂದು ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಸಲಹೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ, “ರೋಹಿತ್ ಶರ್ಮಾ ಅವರೇ ಟೀಮ್ ಇಂಡಿಯಾದ ನಾಯಕರಾಗಬೇಕು. ಏಕೆಂದರೆ ತವರು ಅಂಗಳದಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅವರು ಉತ್ತಮ ಪ್ರದರ್ಶನ ತೋರಿದ್ದಾರೆ. ಆತನೊಬ್ಬ ಪ್ರಬುದ್ಧ ನಾಯಕ. ಆದ್ದರಿಂದ 2024ರ ಟಿ20 ವಿಶ್ವಕಪ್ ಟೂರ್ನಿಯವರೆಗೂ ಅವರೇ ತಂಡವನ್ನು ಮುನ್ನಡೆಸುತ್ತಾರೆಂದು ನಾನು ಭಾವಿಸುತ್ತೇನೆ,” ಎಂದು ಮಾಜಿ ನಾಯಕ ಸೌರವ್ ಗಂಗೂಲಿ ಹೇಳಿದ್ದಾರೆ.
ರೋಹಿತ್ ಶರ್ಮಾ ಇದುವರೆಗೂ ತಮ್ಮ ನಾಯಕತ್ವದಲ್ಲಿ 51 ಟಿ20-ಐ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದು 39ರಲ್ಲಿ ಗೆಲುವು ಸಾಧಿಸಿದ್ದು, ಇನ್ನೂ 4 ಪಂದ್ಯಗಳಲ್ಲಿ ಗೆಲುವು ಪಡೆದರೆ ಯಶಸ್ವಿ ನಾಯಕರಾಗುವ ಮೂಲಕ ಐಯಾನ್ ಮಾರ್ಗನ್ ಹಾಗೂ ಬಾಬರ್ ಆಝಮ್ ಹೆಸರಿನಲ್ಲಿರುವ ದಾಖಲೆಗಳನ್ನು ಮುರಿಯಲಿದ್ದಾರೆ.

