ನವದೆಹಲಿ : ಭಾರತೀಯ ನೌಕಾಪಡೆಗೆ ಇದೇ ಮೊದಲ ಬಾರಿಗೆ ಮಹಿಳಾ ಕಮಾಂಡಿಂಗ್ ಅಧಿಕಾರಿಯನ್ನು ನೇಮಕ ಮಾಡಲಾಗಿದೆ.
ಎಲ್ಲಾ ಶ್ರೇಣಿಯ ಹುದ್ದೆಗಳಲ್ಲಿಯೂ ಮಹಿಳೆಯರನ್ನು ನೇಮಕ ಮಾಡುವ ಗುರಿ ಹೊಂದಿರುವ ಭಾರತೀಯ ನೌಕಾಪಡೆಯು ಮೊದಲ ಮಹಿಳಾ ಕಮಾಂಡಿಂಗ್ ಅಧಿಕಾರಿಯನ್ನು ನೇಮಕ ಮಾಡಿದೆ ಎಂದು ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಆರ್. ಹರಿ ಕುಮಾರ್ ಹೇಳಿದ್ದಾರೆ.
ನೌಕಾಪಡೆ ದಿನಕ್ಕೂ ಮೊದಲು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅಡ್ಮಿರಲ್ ಕುಮಾರ್, ಕಳೆದ 1 ವರ್ಷದಲ್ಲಿ ಭಾರತೀಯ ನೌಕಾಪಡೆಯ ಹಡಗುಗಳು, ಜಲಾಂತರ್ಗಾಮಿ ನೌಕೆಗಳು ಮತ್ತು ವಿಮಾನಗಳು ಆಯಕಟ್ಟಿನ ನೀರಿನಲ್ಲಿ ಹೆಚ್ಚಿನ ಕಾರ್ಯಾಚರಣೆಯನ್ನು ಮಾಡಿದೆ ಎಂದು ತಿಳಿಸಿದ್ದಾರೆ.

ಹಿಂದೂ ಮಹಾಸಾಗರದಲ್ಲಿ ಹೆಚ್ಚುತ್ತಿರುವ ಚೀನಾದ ಆಕ್ರಮಣಗಳ ಕುರಿತು ಮಾತನಾಡಿದ ಅವರು, ಭಾರತೀಯ ನೌಕಾಪಡೆಯು ಈ ಪ್ರದೇಶದಲ್ಲಿನ ಎಲ್ಲಾ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡುತ್ತದೆ ಎಂದರು.
ನಮ್ಮ ಹಡಗುಗಳು, ಜಲಾಂತರ್ಗಾಮಿ ನೌಕೆಗಳು ಮತ್ತು ವಿಮಾನಗಳು ಹೆಚ್ಚಿನ ಕಾರ್ಯಾಚರಣೆಯ ವೇಗವನ್ನು ಹೊಂದಿವೆ. ನಮ್ಮ ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸಲು ಮತ್ತು ಉತ್ತೇಜಿಸಲು ನಮ್ಮ ಘಟಕಗಳನ್ನು ಹಿಂದೂ ಮಹಾಸಾಗರದ ಪ್ರದೇಶ ಮತ್ತು ಅದರಾಚೆಗೆ ನಿಯೋಜಿಸಲಾಗಿದೆ ಎಂದು ಅವರು ಹೇಳಿದರು.
ನಾವು ತೆಗೆದುಕೊಳ್ಳುವ ಪ್ರತಿಯೊಂದು ಕ್ರಿಯೆಯು ನಮ್ಮ ಮಹಿಳೆಯರು ಮತ್ತು ಪುರುಷರನ್ನು ಕಾರ್ಯಾಚರಣೆಯ ಘಟಕಗಳಲ್ಲಿ ಸಕ್ರಿಯಗೊಳಿಸುವ ಗುರಿಯನ್ನು ಹೊಂದಿದೆ ಎಂದು ತಿಳಿಸಿದರು.
ಭಾರತೀಯ ನೌಕಾಪಡೆಯು ನೌಕಾ ಹಡಗಿನಲ್ಲಿ ಮೊದಲ ಮಹಿಳಾ ಕಮಾಂಡಿಂಗ್ ಅಧಿಕಾರಿಯನ್ನು ನೇಮಿಸಿದೆ. ಮಹಿಳಾ ಅಗ್ನಿವೀರರ ಒಟ್ಟಾರೆ ಸಾಮರ್ಥ್ಯ ಈಗ 1,000 ಗಡಿಯನ್ನು ದಾಟಿದೆ. ಈ ಅಂಕಿಅಂಶದಿಂದ ಮಹಿಳೆಯರನ್ನು ಎಲ್ಲಾ ಶ್ರೇಣಿಯ ಹುದ್ದೆಗಳಲ್ಲಿ ನೇಮಕ ಮಾಡುವ ತತ್ವಕ್ಕೆ ಸಾಕ್ಷಿಯಾಗಿದೆ ಎಂದು ಮಾಹಿತಿ ನೀಡಿದರು.


































