ಬೆಂಗಳೂರು: ಖ್ಯಾತ ಹಿರಿಯ ನಟಿ ಹೇಮಾ ಚೌಧರಿ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ.
ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಎರಡು ದಿನಗಳ ಹಿಂದೆ ಹೇಮಾ ಚೌಧರಿಗೆ ಬ್ರೈನ್ ಹ್ಯಾಮರೇಜ್ ಆಗಿತ್ತು. ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ತೀವ್ರ ನಿಗಾ ಘಟಕದಲ್ಲಿ ಅವರನ್ನು ಇಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಐರ್ಲೆಂಡ್‌ನಲ್ಲಿರುವ ಮಗನ ಆಗಮನಕ್ಕೆ ಕುಟುಂಬ ಕಾಯುತ್ತಿದೆ. ಅವರ ದೇಹ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂದು ತಿಳಿದು ಬಂದಿದೆ.

ಇತ್ತೀಚೆಗೆ ನಿಧನರಾದ ಹಿರಿಯ ನಟಿ ಲೀಲಾವತಿ ಅವರ ಪುಣ್ಯತಿಥಿ ಮೊನ್ನೆ 18ರಂದು ಅವರ ನೆಲಮಂಗಲದ ಸೋಲದೇವನಹಳ್ಳಿ ತೋಟದ ಮನೆಯಲ್ಲಿ ನೆರವೇರಿತ್ತು. ಆ ವೇಳೆ ಹೇಮಾ ಚೌಧರಿಯವರು ಬಂದಿದ್ದರು. ಅದಾದ ನಂತರ ಇದ್ದಕ್ಕಿದ್ದಂತೆ ತೀವ್ರ ಅನಾರೋಗ್ಯ ಉಂಟಾಗಿದೆ.
ಅವರು ಕನ್ನಡ ಸೇರಿದಂತೆ ತೆಲುಗು, ಮಲಯಾಳಂ ಮತ್ತು ತಮಿಳು ಚಿತ್ರಗಳಲ್ಲಿ ಅಭಿನಯಿಸಿದ್ದರು. ರಾಜಕುಮಾರ್, ವಿಷ್ಣುವರ್ಧನ್, ಅಂಬರೀಶ್, ಕಮಲ್ ಹಾಸನ್, ಚಿರಂಜೀವಿ, ಮೋಹನ್ ಬಾಬು, ಮಲಯಾಳಂ ಸೂಪರ್ ಸ್ಟಾರ್ ಪ್ರೇಮ್ ನಜೀರ್, ಅನಂತ್ ನಾಗ್, ಶಂಕರ್ ನಾಗ್, ರವಿಚಂದ್ರನ್ ಹೀಗೆ ಅನೇಕ ನಟರ ಜತೆ ಹೇಮಾ ಚೌಧರಿ ತೆರೆ ಹಂಚಿಕೊಂಡಿದ್ದರು.

