ಹುಬ್ಬಳ್ಳಿ: ಅಂಗನವಾಡಿ ಕೇಂದ್ರದ ಸಿಬ್ಬಂದಿಯು ಲಸಿಕೆ ಓವರ್ ಡೋಸ್ ನೀಡಿದ ಕಾರಣ ಎರಡು ವರ್ಷದ ಮಗು ಸಾವನ್ನಪ್ಪಿದೆ ಎಂದು ಪೋಷಕರು ಆರೋಪ ಮಾಡಿದ್ದಾರೆ.
ಈ ಘಟನೆ ಹುಬ್ಬಳ್ಳಿ ನಗರದ ಉಣಕಲ್ನಲ್ಲಿ ನಡೆದಿದೆ. ಧೃವ (2 ) ಸಾವನ್ನಪ್ಪಿದ ಮಗು. ಅಜ್ಜಿಯ ಮನೆಯಲ್ಲಿ ಧೃವ ವಾಸವಾಗಿದ್ದು, ಲಸಿಕೆ ಓವರ್ ಡೋಸ್ ನಿಂದಾಗಿ ಮಗು ಸಾವನ್ನಪ್ಪಿದೆ ಎಂದು ಹೇಳಲಾಗುತ್ತಿದೆ.
ಪ್ರತಿ ಗುರುವಾರ ಮಕ್ಕಳಿಗೆ ಆರೋಗ್ಯ ಇಲಾಖೆಯಿಂದ ಲಸಿಕೆ ಹಾಕುತ್ತಾರೆ. ಅದರಂತೆ ಗುರುವಾರ ಮಧ್ಯಾಹ್ನ ಸಾಯಿನಗರದ ಅಂಗನವಾಡಿಯೊಂದರಲ್ಲಿ ಮಗುವಿನ ಅಜ್ಜಿ ಮಲ್ಲಮ್ಮ ಲಸಿಕೆ ಹಾಕಿಸಿದ್ದಾರೆ. ಒಂದೇ ದಿನಕ್ಕೆ ಐದು ಲಸಿಕೆಗಳನ್ನು ಅಂಗನವಾಡಿ ಕೇಂದ್ರದ ಸಿಬ್ಬಂದಿ ಹಾಕಿದ್ದಾರೆ. ಲಸಿಕೆ ಹಾಕಿಸಿದ ನಂತರದಲ್ಲಿ ತೀವ್ರ ಜ್ವರ ಹಾಗೂ ಹೊಟ್ಟೆ ನೋವು ಕಾಣಿಸಿಕೊಂಡಿದೆ. ರಾತ್ರಿ ಪೂರ್ತಿ ಮಗು ಬಳಲಿದೆ. ಕೂಡಲೇ ಮಗುವನ್ನು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಕಿಮ್ಸ್ ಗೆ ದಾಖಲಾಗುತ್ತಿದ್ದಂತೆಯೇ ಮಗು ಸಾವನ್ನಪ್ಪಿದೆ ಎನ್ನಲಾಗಿದೆ.

ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ನಿರ್ಲಕ್ಷ್ಯದಿಂದ ಮಗು ಸಾವನ್ನಪ್ಪಿದೆ ಎಂದು ಮಗುವಿನ ಪೋಷಕರು ಆರೋಪಿಸಿದ್ದಾರೆ.
ಕಿಮ್ಸ್ ಆಸ್ಪತ್ರೆ ಈ ಅರೋಪ ತಳ್ಳಿ ಹಾಕಿದ್ದು, ಸದ್ಯ ಮರಣೋತ್ತರ ಪರೀಕ್ಷೆ ಬಳಿಕ ಸತ್ಯಾಂಶ ತಿಳಿಯಲಿದೆ.
