ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣ (ಪಿಎಂಎಲ್‌ಎ) ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಡಿ ಚಾರ್ಜ್‌ಶೀಟ್‌ನಲ್ಲಿ ಪ್ರಿಯಾಂಕಾ ಗಾಂಧಿ ಹೆಸರು ಉಲ್ಲೇಖಿಸಿರುವ ಬಗ್ಗೆ ವರದಿಯಾಗಿದೆ.
ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಮತ್ತು ಪುತ್ರಿ ಪ್ರಿಯಾಂಕಾ ಗಾಂಧಿ ವಾದ್ರಾ ದೆಹಲಿ ಮೂಲದ ರಿಯಲ್ ಎಸ್ಟೇಟ್ ಏಜೆಂಟ್ ಮೂಲಕ ಹರಿಯಾಣದಲ್ಲಿ ಭೂಮಿ ಖರೀದಿಸಿದ್ದಾರೆ ಎಂದು ಇಡಿ ತನ್ನ ಚಾರ್ಜ್ ಶೀಟ್‌ನಲ್ಲಿ ಹೇಳಿದೆ.
ಹರ್ಯಾಣದ ಫರೀದಾಬಾದ್‌ನಲ್ಲಿ ಪ್ರಿಯಾಂಕಾ ಗಾಂಧಿ 5 ಏಕರೆ ಕೃಷಿ ಜಮೀನನ್ನು 2006ರಲ್ಲಿ ಖರೀದಿಸಿದ್ದಾರೆ. ದೆಹಲಿ ಮೂಲದ ರಿಯಲ್ ಎಸ್ಟೇಟ್ ಎಜೆಂಟ್ ಹೆಚ್ಎಲ್ ಪಹ್ವಾ ಬಳಿಯಿಂದ ಈ ಜಮೀನನ್ನು ಪ್ರಿಯಾಂಕ ಗಾಂಧಿ ವಾದ್ರಾ ಖರೀದಿಸಿದ್ದಾರೆ. ಬಳಿಕ 2010ರಲ್ಲಿ ಇದೇ 5 ಏಕರೆ ಕೃಷಿ ಭೂಮಿಯನ್ನು ಮತ್ತದೇ ಹೆಚ್‌ಎಲ್ ಪಹ್ವಾಗೆ ಮಾರಾಟ ಮಾಡಿದ್ದಾರೆ. ಇದೇ ರಿಯಲ್ ಎಜೆಂಟ್‌ನಿಂದ ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್ ವಾದ್ರಾ 2005-06ರಲ್ಲಿ 40.08 ಏಕರೆ ಭೂಮಿಯನ್ನು ಖರೀದಿಸಿದ್ದರು. ಅಮಿಪುರ್ ಗ್ರಾಮದ ಬಳಿ ಇರುವ ಈ ಜಮೀನನ್ನು ಬಳಿಕ 2010ರಲ್ಲಿ ಇದೇ ಹೆಚ್‌ಎಲ್ ಪಹ್ವಾಗೆ ಮಾರಾಟ ಮಾಡಿದ್ದಾರೆ.

ಇದೇ ರಿಯಲ್ ಎಸ್ಟೇಟ್ ಎಜೆಂಟ್ ಹೆಚ್ಎಲ್ ಪಹ್ವಾ ಹಾಗೂ ಎನ್ಆರ್‌ಐ ಸಿಸಿ ಥಂಪಿ ಹಲವು ಉದ್ಯಮದಲ್ಲಿ ಜೊತೆಗಾರರಾಗಿದ್ದಾರೆ. ಈ ಸಿಸಿ ಥಂಪಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಲುಕಿ ವಿದೇಶಕ್ಕೆ ಪರಾರಿಯಾಗಿದ್ದಾರೆ. ಸಿಸಿ ಥಂಪಿ ಇದೇ ರಿಯಲ್ ಎಸ್ಟೇಟ್ ಎಜೆಂಟ್ ಹೆಚ್ಎಲ್ ಪಹ್ವಾ ಬಳಿಯಿಂದ ಭೂಮಿ ಖರೀದಿಸಿದ್ದಾರೆ.2016ರಲ್ಲಿ ಭಾರತ ತೊರೆದಿರುವ ಸಂಜಯ್ ಭಂಡಾರಿ ಮೇಲೆ ಅಕ್ರಮ ಹಣ ವರ್ಗಾವಣೆ, ರಕ್ಷಣಾ ಮಧ್ಯವರ್ತಿಯಾಗಿ ಲಂಚ ಪಡೆದ ಆರೋಪ ಸೇರಿದಂತೆ ಹಲವು ಆರೋಪಗಳು ಸಂಜಯ್ ಭಂಡಾರಿ ಮೇಲಿದೆ. ಈ ಆರೋಪಿ ಕೂಡ ಹೆಚ್‌ಎಲ್ ಪಹ್ವಾ ಜೊತೆ ಆತ್ಮೀಯ ಸಂಬಂಧ ಹೊಂದಿದ್ದಾರೆ.
ಕೋರ್ಟ್‌ಗೆ ಸಲ್ಲಿಸಿರುವ ಅಧಿಕೃತ ದಾಖಲೆಯಲ್ಲಿ ಇದೇ ಮೊದಲ ಬಾರಿಗೆ ಪ್ರಿಯಾಂಕಾ ಗಾಂಧಿ ಅಕ್ರಮದ ಕುರಿತು ಉಲ್ಲೇಖವಾಗಿದೆ. ಇತ್ತೀಚೆಗೆ ರಾಬರ್ಟ್ ವಾದ್ರಾ ವಿರುದ್ಧವೂ ಇಡಿ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ದೇಶಭ್ರಷ್ಟ ರಕ್ಷಣಾ ಮಧ್ಯವರ್ತಿ ಸಂಜಯ್ ಭಂಡಾರಿ ಅಕ್ರಮ ಹಣದಲ್ಲಿ ಪಾಲು ಪಡೆದಿರುವ ರಾಬರ್ಟ್ ವಾದ್ರಾ ತಮ್ಮ ಲಂಡನ್‌ನಲ್ಲಿರುವ ಮನೆಯನ್ನು ನವೀಕರಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

