ಕುಂದಾಪುರ : ಅನ್ನಭಾಗ್ಯದ ಅಕ್ಕಿಯನ್ನು ಗೂಡ್ಸ್ ರಿಕ್ಷಾದಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಓರ್ವನನ್ನು ವಶಕ್ಕೆ ಪಡೆದಿರುವ ಘಟನೆ ಖಾರ್ವಿಕೇರಿಯಲ್ಲಿ ಗುರುವಾರ(ಡಿ.28) ನಡೆದಿದೆ.
ಕುಂದಾಪುರ ಮೇಲ್ಕೇರಿಯ ಕೃಷ್ಣ(43) ಬಂಧಿತ.

ಕುಂದಾಪುರ ಆಹಾರ ನಿರೀಕ್ಷಕ ಸುರೇಶ ಎಚ್.ಎಸ್. ಅವರಿಗೆ ಸರಕಾರದ ಉಚಿತ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದ ಅಕ್ಕಿಯನ್ನು ಕಾನೂನು ಬಾಹಿರವಾಗಿ ಮಾರಾಟ ಮಾಡಲು ವಾಹನದಲ್ಲಿ ಸಾಗಾಟ ಮಾಡುತ್ತಿರುವುದಾಗಿ ಮಾಹಿತಿ ಬಂದಿದ್ದು, ಕೂಡಲೇ ಕುಂದಾಪುರ ಪೆÇಲೀಸ್ ಠಾಣೆಗೆ ಬಂದು ಅಲ್ಲಿಂದ ಪಿ.ಎಸ್.ಐ ವಿನಯ್ ಎಂ ಕೊರ್ಲಹಳ್ಳಿ ಹಾಗೂ ಸಿಬ್ಬಂದಿಯವರೊಂದಿಗೆ ಕಾರ್ಯಾಚರಣೆಗೆ ಇಳಿದಿದ್ದಾರೆ.
ಸಂಗಂಮ್ ಕಡೆಗೆ ಒಂದು ಗೂಡ್ಸ್ ವಾಹನವು ಬರುತ್ತಿರುವುದನ್ನು ಕಂಡು ವಾಹನವನ್ನು ತಡೆದು ನಿಲ್ಲಿಸಿ ಪರಿಶೀಲಿಸಲಾಗಿ ಗೂಡ್ಸ್ ರಿಕ್ಷಾ ಗಾಡಿಯಲ್ಲಿ ಬಿಳಿ ಬಣ್ಣದ 6 ಪಾಲೀತಿನ್ ಚೀಲಗಳಲ್ಲಿ ಅಕ್ಕಿಯನ್ನು ತುಂಬಿಸಿರುವುದು ಕಂಡುಬಂದಿದೆ.
ಒಟ್ಟು 200 ಕೆ.ಜಿ ಅಕ್ಕಿಯನ್ನು ವಶಕ್ಕೆ ಪಡೆಯಲಾಗಿದೆ.
ಆತನಲ್ಲಿ ವಿಚಾರಿಸಿದಾಗ ಸರಕಾರದ ಅನ್ನ ಭಾಗ್ಯ ಯೋಜನೆಯ ಬೆಳ್ತಿಗೆ ಅಕ್ಕಿಯನ್ನು ಖಾರ್ವಿಕೇರಿಯ ಆಸುಪಾಸಿನ ಮನೆಗಳಲ್ಲಿ ಜನರ ಬಳಿ ಸಂಗ್ರಹಿಸಿದ್ದು, ಅಕ್ಕಿಯನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ಸಾಗಾಟ ಮಡುತ್ತಿರುವುದು ತಿಳಿದುಬಂದಿದೆ. ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



































