ಮಂಗಳೂರು: ಮಂಗಳೂರು- ಮಡಗಾಂವ್ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ವೀಡಿಯೊ ಕಾನ್ಫರೆನ್ಸ್ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶನಿವಾರ ಚಾಲನೆ ನೀಡಿದರು.
ಮಂಗಳೂರು-ಮಡಂಗಾವ್ ಸೇರಿ 6 ವಂದೇ ಮಾತರಂ, 2 ಅಮೃತ್ ಭಾರತ್ ರೈಲಿಗೆ ಏಕಕಾಲದಲ್ಲಿ ಚಾಲನೆ ನೀಡಲಾಯಿತು.
ಮಂಗಳೂರು ಗೋವಾ ವಂದೇ ಭಾರತ್ ವೇಳಾಪಟ್ಟಿ
ಮಂಗಳೂರು ಗೋವಾ ವಂದೇ ಭಾರತ್ ಸೂಪರ್ ಫಾಸ್ಟ್ ರೈಲು ಮಂಗಳೂರಿನಿಂದ ಕೇವಲ 4.15 ಗಂಟೆ ಅವಧಿಯಲ್ಲಿ ಗೋವಾ ತಲುಪಲಿದೆ. ಈ ರೈಲು ಗಂಟೆಗೆ 160 ಕಿಮೀ ವೇಗದಲ್ಲಿ ಸಂಚರಿಸಲಿದೆ. ವಂದೇ ಭಾರತ್ ರೈಲು ಮಂಗಳವಾರ ಹೊರತುಪಡಿಸಿ ವಾರದ ಆರು ದಿನವೂ ಸಂಚಾರ ಮಾಡಲಿದೆ.

ಮಂಗಳೂರಿನಿಂದ ಬೆಳಗ್ಗೆ 8.30 ಕ್ಕೆ ಹೊರಡುವ ವಂದೇ ಭಾರತ್ ರೈಲು ಮಧ್ಯಾಹ್ನ 1.15 ಕ್ಕೆ ಗೋವಾದ ಮಡಗಾಂವ್ ತಲುಪಲಿದೆ. ಮತ್ತೆ ಸಂಜೆ ಮಡಗಾಂವ್ ನಿಂದ 6.10ಕ್ಕೆ ಹೊರಟು ರಾತ್ರಿ 10.45ಕ್ಕೆ ಮಂಗಳೂರು ತಲುಪಲಿದೆ.
ಈ ರೈಲಿಗೆ ಉಡುಪಿ ಮತ್ತು ಕಾರವಾರದಲ್ಲಿ ಎರಡು ಕಡೆ ಮಾತ್ರ ನಿಲುಗಡೆ ಇರಲಿದೆ. ಇದು ಎಂಟು ಬೋಗಿಗಳ ಹವಾನಿಯಂತ್ರಿತ ವ್ಯವಸ್ಥೆಯ ರೈಲಾಗಿದ್ದು, ಏರ್ ಲೈನ್ ಮಾದರಿ ಸೀಟುಗಳ ಜೊತೆಗೆ ಎಕ್ಸಿಕ್ಯುಟಿವ್ ಚೇರ್ಗಳ ವ್ಯವಸ್ಥೆ ಇದರಲ್ಲಿದೆ. ಆನ್‌ಬೋರ್ಡ್ ಸಸ್ಯಹಾರಿ ಮತ್ತು ಮಾಂಸಹಾರಿ ಊಟದ ವ್ಯವಸ್ಥೆ ಕೂಡ ರೈಲಿನಲ್ಲಿದೆ.
ಆನ್‌ಬೋರ್ಡ್ ವೈ-ಫೈ ಮತ್ತು ಇನ್ಫೋಟೈನ್‌ಮೆಂಟ್ ಸಿಸ್ಟಮ್, ಎಲೆಕ್ಟ್ರಿಕ್ ಔಟ್‌ಲೆಟ್‌ಗಳು ಮತ್ತು ರೀಡಿಂಗ್ ಲೈಟ್‌ಗಳ ಸೌಲಭ್ಯ ಇದೆ. ಜತೆಗೆ ಸ್ವಯಂಚಾಲಿತ ಬಾಗಿಲುಗಳು, ಸ್ಮೋಕ್ ಅಲರ್ಟ್, ಸಿಸಿಟಿವಿ ಕ್ಯಾಮೆರಾಗಳು, ಸೆನ್ಸಾರ್ ಆಧಾರಿತ ವಾಶ್ ಬೇಸಿನ್ ಕೂಡ ಇವೆ.
