ಹಾಸನ : ತಾಯಿ ಮತ್ತು ಇಬ್ಬರು ಮಕ್ಕಳು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹೊರವಲಯದ ದಾಸರಕೊಪ್ಪಲಿನಲ್ಲಿ ನಡೆದಿದೆ.
ತಾಯಿ ಶಿವಮ್ಮ(36), ಸಿಂಚು(7), ಪವನ್(10) ಮೃತಪಟ್ಟವರು.
ಪತಿ ತೀರ್ಥ ತುಮಕೂರಿಗೆ ಕೆಲಸಕ್ಕೆ ಹೋಗಿದ್ದರು ಎನ್ನಲಾಗಿದೆ.

ಸೋಮವಾರ ಸಂಜೆ ಪತ್ನಿಗೆ ದೂರವಾಣಿ ಕರೆ ಮಾಡಿದ್ದ ಪತಿ ತಾನು ಹಾಸನಕ್ಕೆ ಬರುತ್ತಿದ್ದು ರಾತ್ರಿ ಊಟಕ್ಕೆ ಅಡುಗೆ ಸಿದ್ಧಪಡಿಸಲು ಹೇಳಿದ್ದರು. ಆದರೆ ರಾತ್ರಿ ತಡವಾಗಿ ಬಂದ ಆತ ಬಾಗಿಲು ತಟ್ಟಿದಾಗ ಪತ್ನಿ ಬಾಗಿಲು ತೆರೆಯಲಿಲ್ಲ.
ಫೋನ್ ಕರೆಯನ್ನೂ ಸ್ವೀಕರಿಸಲಿಲ್ಲ. ಆಕೆ ನಿದ್ರೆ ಹೋಗಿರಬಹುದು ಎಂದು ಭಾವಿಸಿದ ಪತಿ ಮನೆಯ ಮೇಲ್ಛಾವಣಿಗೆ ಹೋಗಿ ಮಲಗಿದ್ದರು.
ಬೆಳಗ್ಗೆ ಕೆಳಗೆ ಬಂದು ಪುನಃ ಬಾಗಿಲು ಬಡಿದರೂ ಬಾಗಿಲು ತೆಗೆಯಲಿಲ್ಲ. ಫೋನ್ ಕರೆ ಮಾಡಿದರೂ ಪ್ರತಿಕ್ರಿಯೆ ಬಾರದ್ದರಿಂದ ಅನುಮಾನಗೊಂಡ ಆತ ಮನೆ ಮಾಲೀಕರ ಸಹಾಯದಿಂದ ಇನ್ನೊಂದು ಕೀ ಪಡೆದು ಬಾಗಿಲು ತೆರೆದು ಒಳಗೆ ಹೋಗಿದ್ದಾರೆ.
ಮನೆಯ ಒಳಗೆ ಗಾಢವಾದ ಎಲ್ಪಿಜಿ ವಾಸನೆ ತುಂಬಿತ್ತು. ಹೀಗಾಗಿ ಮೊದಲು ಕಿಟಕಿ, ಬಾಗಿಲು ತೆರೆದಿಟ್ಟು ಕೆಲ ನಿಮಿಷಗಳ ನಂತರ ಒಳ ಹೋದಾಗ ನೆಲದ ಮೇಲೆ ಕುಳಿತ ತಾಯಿಯ ಕಾಲುಗಳ ಮೇಲೆ ಇಬ್ಬರು ಮಕ್ಕಳು ಪ್ರಾಣ ಕಳೆದುಕೊಂಡಿದ್ದವು.

ಸಾವಿಗೆ ಕಾರಣ ತನಿಖೆಯಿಂದಷ್ಟೇ ತಿಳಿಯಬೇಕಿದೆ. ಪೆನ್ಷನ್ ಮೊಹಲ್ಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


































