ಪಡುಬಿದ್ರಿ : ಸ್ಕೂಟಿಗೆ ಬಸ್ ಡಿಕ್ಕಿ ಹೊಡೆದು ಸವಾರ ಸಾವನ್ನಪ್ಪಿರುವ ಘಟನೆ ಪಡುಬಿದ್ರಿ ಜಂಕ್ಷನ್ನಲ್ಲಿ ನಡೆದಿದೆ.
ಪಲಿಮಾರು ದರ್ಕಾಸ್ತು ನಿವಾಸಿ ಧನ್ ರಾಜ್ ಪಲಿಮಾರು(17) ಮೃತ ಸವಾರ.
ಪಲಿಮಾರಿನಿಂದ ಸ್ಕೂಟಿಯಲ್ಲಿ ಎರ್ಮಾಳಿನ ಪೂಂದಾಡು ಎಂಬಲ್ಲಿಗೆ ರವಿವಾರ ರಾತ್ರಿ ನಾಟಕ ನೋಡಲು ತುಷಾರ್, ಕೌಶಿಕ್,ಧನರಾಜ್ ತೆರಳುತ್ತಿದ್ದರು.

ತುಷಾರ್ ಸ್ಕೂಟಿ ಚಲಾಯಿಸುತ್ತಿದ್ದು, ಕೌಶಿಕ್ ಮತ್ತು ಧನರಾಜ್ ಎಂಬುವರನ್ನು ಹಿಂಬದಿ ಸವಾರರಾಗಿ ಕುಳಿತಿದ್ದರು. ಈ ವೇಳೆ ಹೆದ್ದಾರಿಯಲ್ಲಿ ಬೆಂಗಳೂರಿಗೆ ಹೋಗುತ್ತಿದ್ದ ಬಸ್ಸೊಂದು ಡಿಕ್ಕಿಯಾಗಿದೆ. ಪರಿಣಾಮ ಸ್ಕೂಟರ್ ಸವಾರ ಹಾಗೂ ಹಿಂಬದಿ ಸವಾರರಿಬ್ಬರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದಿದ್ದು, ಬಸ್ಸು ಸ್ಕೂಟಿಯನ್ನು ಸ್ವಲ್ಪ ದೂರ ಎಳೆದುಕೊಂಡು ಹೋಗಿ ನಿಂತಿದೆ ಎನ್ನಲಾಗಿದೆ.
ಗಂಭೀರವಾಗಿ ಗಾಯಗೊಂಡ ಧನ್ ರಾಜ್ ಪಲಿಮಾರು ಮುಕ್ಕದ ಆಸ್ಪತ್ರೆಗೆ ಕೊಂಡೊಯ್ಯುವ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ.
ತುಷಾರ್ ಪಲಿಮಾರು ಹಾಗೂ ಕೌಶಿಕ್ ಎರ್ಮಾಳು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ಕಾರ್ಕಳ ರಸ್ತೆಯಿಂದ ಹೆದ್ದಾರಿಗೆ ಪ್ರವೇಶಿಸುವ ಸಂದರ್ಭದಲ್ಲಿ ಈ ಅಪಘಾತವು ಸಂಭವಿಸಿದೆ. ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



































