ಮುಂಬೈ : ಬೇಹುಗಾರಿಕೆ ಆರೋಪದಲ್ಲಿ ಕತಾರ್ನಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿದ್ದ ಭಾರತದ ಮಾಜಿ ನಾವಿಕರ ಬಿಡುಗಡೆಯಲ್ಲಿ ನನ್ನ ಯಾವುದೇ ರೀತಿಯ ಪಾತ್ರವಿಲ್ಲ ಎಂದು ಬಾಲಿವುಡ್ ನಟ ಶಾರುಖ್ ಖಾನ್ ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಮಾಡಿದ್ದ ಟ್ವೀಟ್ ವ್ಯಾಪಕ ವೈರಲ್ ಆಗುತ್ತಿರುವ ಬೆನ್ನಲ್ಲೇ ಶಾರುಖ್ ಖಾನ್ ಅವರ ಕಚೇರಿಯು ಈ ಕುರಿತು ಹೇಳಿಕೆ ಬಿಡುಗಡೆ ಮಾಡಿದೆ.
ಕತಾರ್ನಿಂದ ಎಂಟು ನೌಕಾಪಡೆಯ ಪುರುಷರ ಬಿಡುಗಡೆಗೆ ಸಹಾಯ ಮಾಡುವಲ್ಲಿ ಶಾರುಖ್ ಖಾನ್ ಅವರ ಯಾವುದೇ ಪಾಲ್ಗೊಳ್ಳುವಿಕೆ ಇಲ್ಲ ಎಂದು ಹೇಳಿದೆ.

ಕತಾರ್ನಿಂದ ಭಾರತದ ನೌಕಾ ಅಧಿಕಾರಿಗಳನ್ನು ಬಿಡುಗಡೆ ಮಾಡುವಲ್ಲಿ ಶಾರುಖ್ ಖಾನ್ ಅವರ ಉದ್ದೇಶಿತ ಪಾತ್ರದ ಕುರಿತಾದ ವರದಿಗಳ ಬಗ್ಗೆ, ನಟ ಶಾರುಖ್ ಖಾನ್ ಅವರ ಕಚೇರಿಯು ಅಂತಹ ಯಾವುದೇ ಸಮರ್ಥನೆಗಳು ಆಧಾರರಹಿತವಾಗಿವೆ ಎಂದು ಹೇಳಿದೆ. ಈ ಯಶಸ್ವಿ ನಿರ್ಣಯದ ಕಾರ್ಯಗತಗೊಳಿಸುವಿಕೆಯು ಕೇವಲ ಭಾರತ ಸರ್ಕಾರದ ಅಧಿಕಾರಿಗಳ ಮೇಲೆ ಮಾತ್ರ ನಿಂತಿದೆ ಮತ್ತು ಈ ವಿಷಯದಲ್ಲಿ ಶಾರುಖ್ ಖಾನ್ ಅವರ ಭಾಗವಹಿಸುವಿಕೆಯನ್ನು ನಾವು ನಿಸ್ಸಂದಿಗ್ಧವಾಗಿ ನಿರಾಕರಿಸುತ್ತೇವೆ ಎಂದು ಹೇಳಿದೆ.
ಅಲ್ಲದೆ, ರಾಜತಾಂತ್ರಿಕತೆ ಮತ್ತು ರಾಜ್ಯಕಾರ್ಯವನ್ನು ಒಳಗೊಂಡಿರುವ ಎಲ್ಲಾ ವಿಷಯಗಳನ್ನು ನಮ್ಮ ಅತ್ಯಂತ ಸಮರ್ಥ ನಾಯಕರು ಉತ್ತಮವಾಗಿ ನಿರ್ವಹಿಸುತ್ತಾರೆ. ಇತರ ಅನೇಕ ಭಾರತೀಯರಂತೆ ಶಾರುಖ್ ಖಾನ್ ಅವರು ನೌಕಾಪಡೆಯ ಅಧಿಕಾರಿಗಳು ಮನೆಯಲ್ಲಿ ಸುರಕ್ಷಿತವಾಗಿರುವುದಕ್ಕೆ ಸಂತೋಷಪಡುತ್ತಾರೆ ಮತ್ತು ಅವರಿಗೆ ಶುಭ ಹಾರೈಸುತ್ತಾರೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಕತಾರ್ ಜೈಲಿನಿಂದ ಎಂಟು ಭಾರತೀಯ ನೌಕಾಪಡೆಯ ಯೋಧರನ್ನು ಬಿಡುಗಡೆ ಮಾಡುವಲ್ಲಿ ಬಾಲಿವುಡ್ ತಾರೆಯೇ ಹೊರತು ಭಾರತ ಸರ್ಕಾರವಲ್ಲ ಎಂದು ಆರೋಪಿಸಿ ಅನುಭವಿ ರಾಜಕಾರಣಿ ಸುಬ್ರಮಣಿಯನ್ ಸ್ವಾಮಿ ಅವರು ಟ್ವೀಟ್ ಮಾಡಿದ್ದರು.
ಟ್ವೀಟ್ ಮಾಡಿದ್ದ ಸುಬ್ರಮಣಿಯನ್ ಸ್ವಾಮಿ :

ಪ್ರಧಾನಿ ನರೇಂದ್ರ ಮೋದಿ ಅವರ ಕತಾರ್ ಪ್ರವಾಸದ ಕುರಿತ ಟ್ವೀಟ್ ಗೆ ರಿಪ್ಲೈ ಮಾಡಿದ್ದ ಸ್ವಾಮಿ, ‘ಕತಾರ್ನ ಶೇಖ್ಗಳನ್ನು ಮನವೊಲಿಸಲು ವಿದೇಶಾಂಗ ಸಚಿವಾಲಯ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರರು ವಿಫಲವಾದ ನಂತರ ಮೋದಿ ಅವರು ಸಿನಿಮಾ ತಾರೆ ಶಾರುಕ್ ಖಾನ್ ಅವರಿಗೆ ಮಧ್ಯ ಪ್ರವೇಶಿಸುವಂತೆ ಮನವಿ ಮಾಡಿಕೊಂಡರು. ಹೀಗಾಗಿ, ನಮ್ಮ ನೌಕಾ ಅಧಿಕಾರಿಗಳನ್ನು ಬಿಡುಗಡೆ ಮಾಡಲು ಕತಾರ್ ಶೇಖ್ಗಳೊಂದಿಗೆ ದುಬಾರಿ ಒಪ್ಪಂದವನ್ನು ಕುದುರಿಸಿಕೊಂಡರು ಎಂದು ಟೀಕಿಸಿದ್ದಾರೆ.
ಕತಾರ್ಗೆ ತೆರಳಿದ್ದ ಶಾರುಖ್ :
ಅಂದಹಾಗೆ, ಈ ಹಿಂದೆ ಕತಾರ್ ನಲ್ಲಿ ನಡೆದ ಎಎಫ್ಸಿ ಫುಟ್ಬಾಲ್ ಟೂರ್ನಿಯ ಫೈನಲ್ ಪಂದ್ಯದ ವಿಶೇಷ ಅತಿಥಿಯಾಗಿದ್ದ ಶಾರುಖ್ ಖಾನ್ ಕತಾರ್ಗೆ ತೆರಳಿದ್ದರು. ದೋಹಾದಲ್ಲಿ ಅವರನ್ನು ಕತಾರ್ ಪ್ರಧಾನಿ ಮೊಹಮ್ಮದ್ ಬಿನ್ ಅಬ್ದುಲ್ರಹ್ಮಾನ್ ಬಿನ್ ಜಾಸಿಮ್ ಅಲ್ ಥಾನಿ ಅವರು ಸ್ವಾಗತಿಸಿದ್ದರು.


































