ನವದೆಹಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿಗಳಲ್ಲಿ ಒಬ್ಬನಾದ ಸಂತನ್ ಬುಧವಾರ ಬೆಳಗ್ಗೆ ಚೆನ್ನೈನ ರಾಜೀವ್ ಗಾಂಧಿ ಸರ್ಕಾರಿ ಜನರಲ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಸಂತನ್ ಯಕೃತ್ ಸಮಸ್ಯೆಯಿಂದ ಬಳಲುತ್ತಿದ್ದರು, ರಾಜೀವ್ ಗಾಂಧಿ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು.
ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಏಳು ಆರೋಪಿಗಳಲ್ಲಿ ಶ್ರೀಲಂಕಾದ ಸಂತನ್ ಒಬ್ಬರು ಆಗಿದ್ದರು. ಬಿಡುಗಡೆಯಾದ ಬಳಿಕ ಸಂತನ್ ಅವರನ್ನು ತಿರುಚ್ಚಿ ಕೇಂದ್ರ ಕಾರಾಗೃಹದ ಸ್ಪೆಷಲ್ ಕ್ಯಾಂಪ್ನಲ್ಲಿ ಇರಿಸಲಾಗಿತ್ತು. ಈ ವೇಳೆ ಅನಾರೋಗ್ಯಕ್ಕೆ ಒಳಗಾಗಿದ್ದರು ಎನ್ನಲಾಗಿದೆ.
ಈ ವಿಚಾರಕ್ಕೆ ಸಂಬಂಧಿಸಿ ಅವರಿಗೆ ಸೂಕ್ತ ಚಿಕಿತ್ಸೆಯಾ ಅವಶ್ಯಕತೆ ಇದ್ದುದರಿಂದ ಕಳೆದ ವಾರ, ಕೇಂದ್ರ ವಿದೇಶಾಂಗ ಸಚಿವಾಲಯದ ಅಡಿಯಲ್ಲಿರುವ ವಿದೇಶಿಯರ ಪ್ರಾದೇಶಿಕ ನೋಂದಣಿ ಅಧಿಕಾರಿ (FRRO) 56 ವರ್ಷದ ಸಂತನ್ಗೆ ತುರ್ತು ಪ್ರಯಾಣದ ದಾಖಲೆಯನ್ನು ಒದಗಿಸಿ, ಕಳೆದ ವಾರ ಶ್ರೀಲಂಕಾಕ್ಕೆ ತ್ವರಿತ ವಾಪಸಾತಿಗೆ ಅವಕಾಶ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ. ಆದರೆ ಕಳೆದ ಸೋಮವಾರ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆ ಮೂಲಗಳು ಮಾಹಿತಿ ನೀಡಿವೆ.

ಸಂತಾನ್ ಅವರ ವಕೀಲ ಪುಗಜೆಂಧಿ ದಿ ನ್ಯೂಸ್ ಮಿನಿಟ್ಗೆ ಮಾಹಿತಿ ನೀಡಿದ್ದು, ಸಂತನ್ ನಿಧನರಾದಾಗ ಅವರ ಸಹೋದರ ಆಸ್ಪತ್ರೆಯಲ್ಲಿದ್ದರು. ಅಂತಿಮ ವಿಧಿವಿಧಾನಗಳಿಗಾಗಿ ಅವರ ಪಾರ್ಥಿವ ಶರೀರವನ್ನು ಶ್ರೀಲಂಕಾದಲ್ಲಿರುವ ಅವರ ಮನೆಗೆ ಕೊಂಡೊಯ್ಯಲಾಗುತ್ತದೆ ಎಂದು ಹೇಳಿದ್ದಾರೆ.


































