ಹೀನಾಯ ಸೋಲಿನ ನಂತರ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾಲೀಕ ಸಂಜೀವ್ ಗೊಯೆಂಕಾ ಕೋಪಗೊಂಡಿದ್ದಾರೆ. ತಂಡ ನೀಡಿದ ಪ್ರದರ್ಶನದಿಂದ ಅಸಮಾಧಾನಗೊಂಡಂತೆ ಕಂಡುಬಂತು. ಸಂಜೀವ್ ಅವರು ನಾಯಕ ಕೆಎಲ್ ರಾಹುಲ್ ಅವರೊಂದಿಗೆ ಕೋಪದಲ್ಲಿ ಮಾತನಾಡುತ್ತಿರುವುದು ಕಂಡುಬಂದಿದೆ. ಇವರಿಬ್ಬರ ನಡುವಣ ಮಾತುಕತೆ ಏನು ಎಂಬುದು ಸ್ಪಷ್ಟವಾಗಿ ಕೇಳಿಸಿಲ್ಲವಾದರೂ, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವಿಡಿಯೋವನ್ನು ಗಮನಿಸಿರುವ ನೆಟ್ಟಿಗರು ಇವರಿಬ್ಬರು ಜಗಳ ಆಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ.
ಲಕ್ನೋ ಸೂಪರ್ ಜೈಂಟ್ಸ್ ತಂಡ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಹಿಂದೆಂದೂ ಕಾಣದ ರೀತಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಹೀನಾಯ ಸೋಲು ಅನುಭವಿಸಿತು. ಬುಧವಾರ ಹೈದರಾಬಾದಿನ ರಾಜಿವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಎಲ್‌ಎಸ್‌ಜಿ ಬೌಲರ್ ಗಳನ್ನು ಮನಬಂದಂತೆ ದಂಡಿಸಿದ ಎಸ್ ಆರ್ ಹೆಚ್ ಕೇವಲ 9.4 ಓವರ್‌ಗಳಲ್ಲಿ ವಿಕೆಟ್ ಕಳೆದುಕೊಳ್ಳದೆ 167 ರನ್ ಚಚ್ಚಿ ಗೆದ್ದು ಬೀಗಿತು. ಈ ಗೆಲುವು ಪ್ಯಾಟ್ ಕಮ್ಮಿನ್ಸ್ ಪಡೆಗೆ ದೊಡ್ಡ ಪ್ಲಸ್ ಪಾಯಿಂಟ್ ಆದರೆ, ಇತ್ತ ರಾಹುಲ್ ಪಡೆಯ ಪ್ಲೇ ಆಫ್ ಕನಸು ಮತ್ತಷ್ಟು ದೂರವಾಯಿತು. ಈ ಆಘಾತದ ನಡುವೆ ಪಂದ್ಯ ಮುಗಿದ ಬಳಿಕ ವಿಶೇಷ ಘಟನೆಯೊಂದು ನಡೆದಿದೆ.
ಈ ಜಯದೊಂದಿಗೆ ಎಸ್ ಆರ್ ಹೆಚ್ ಆಡಿದ 12 ಪಂದ್ಯಗಲ್ಲಿ ಏಳು ಜಯ ಮತ್ತು ಐದರಲ್ಲಿ ಸೋಲು ಕಂಡು 14 ಅಂಕ ಸಂಪಾದಿಸಿ ಮೂರನೇ ಸ್ಥಾನಕ್ಕೆ ಜಿಗಿದಿದೆ.

ಇತ್ತ ಲಕ್ನೋ ಸೂಪರ್ ಜೇಂಟ್ಸ್ ತಂಡ ಆಡಿರುವ 12 ಪಂದ್ಯಗಳಲ್ಲಿ ಕೇವಲ 12 ಅಂಕಗಳೊಂದಿಗೆ ಟೇಬಲ್‌ನಲ್ಲಿ ಆರನೇ ಸ್ಥಾನಕ್ಕೆ ಕುಸಿದಿದೆ. ಪ್ಲೇ ಆಫ್ಗೆ ಅರ್ಹತೆ ಪಡೆಯಲು ಅವರ ಎರಡೂ ಪಂದ್ಯಗಳಲ್ಲಿ ಗೆಲ್ಲಲೇ ಬೇಕಾದ ಅಗತ್ಯವಿದೆ, ಅಲ್ಲದೆ ಇವರ ನಿವ್ವಳ ರನ್ ರೇಟ್ (NRR) ಮೈನಸ್ನಲ್ಲಿದೆ. ಎಲ್‌ಎಸ್‌ಜಿ ಇದುವರೆಗೆ ಆಡಿದ ಎರಡೂ ಋತುಗಳಲ್ಲಿ ಪ್ಲೇಆಫ್‌ಗಳನ್ನು ತಲುಪಿದೆ, 2022 ಮತ್ತು 2023 ರಲ್ಲಿ ಎಲಿಮಿನೇಟರ್ನಲ್ಲಿ ಸೋಲು ಕಂಡಿತ್ತು