ಶಿರ್ವ : ಸಂತ ಮೇರಿ ಪದವಿ ಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕಿ ಮರಿಯಾ ಜೇಸಿಂತಾ ಪುರ್ತಾಡೋ ಅವರ ಬೀಳ್ಕೊಡುಗೆ ಸಮಾರಂಭ ಇತ್ತೀಚೆಗೆ ನಡೆಯಿತು.

ಗಣಿತ ಉಪನ್ಯಾಸಕಿ ಪ್ರಭಾ ಶೆಣೈ ಮಾತನಾಡಿ, ನನ್ನ ಮತ್ತು ಮರಿಯಾ ಮೇಡಂ ಒಡನಾಟ ಇಪ್ಪತ್ತೆರಡು ವರ್ಷಗಳಷ್ಟು ಹಳೆಯದು. ಬಹಳ ಸಹಕಾರ ಮನೋಭಾವದರಾದ ಇವರು ಬಹುಭಾಷ ಪರಿಣಿತರೂ ಹೌದು. ಜೊತೆಗೆ ಎಲ್ಲಾ ವಿಷಯದ ಕುರಿತು ಆಳವಾದ ಜ್ಞಾನವನ್ನು ಹೊಂದಿದ್ದಾರೆ ಎಂದರು.
ಸಂತ ಮೇರಿ ಪದವಿ ಪೂರ್ವ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಬ್ಯಾಪ್ಟಿಸ್ಟ್ ಮಿರಾಂಡ ಮತ್ತು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ಸಂಚಾಲಕರಾದ ವೆರಿ ರೆವೆರೆಂಡ್ ಫಾದರ್ ಡಾ|ಲೆಸ್ಲಿ ಕ್ಲೀಫರ್ಡ್ ಡಿಸೋಜ ಶುಭ ಹಾರೈಸಿದರು.
ವಿದ್ಯಾರ್ಥಿಗಳ ಪರವಾಗಿ ದ್ವಿತೀಯ ಪಿ.ಯು.ಸಿಯ ಸಾಯಿನಾಥ್ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಉಪನ್ಯಾಸಕ ವೃಂದದವರು ವಿದಾಯ ಗೀತೆಯನ್ನು ಹಾಡಿದರು.

ಕಾರ್ಯಕ್ರಮದಲ್ಲಿ ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷ ಮೇಲ್ವಿನ್ ಅರಾನ್ಹ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೆ.ಆರ್. ಪಾಟ್ಕರ್, ಮರಿಯಾ ಜೇಸಿಂತಾ ಪುರ್ಟಾಡೋ ದಂಪತಿ, ಪ್ರಾಂಶುಪಾಲ ಜಯಶಂಕರ್ ಕೆ. ವಿದ್ಯಾರ್ಥಿ ನಾಯಕಿ ಜೆನಿಷಿಯ ಕಾಸ್ಟಲಿನೋ, ಉಪನ್ಯಾಸಕ, ಉಪನ್ಯಾಸಕೇತರ ವೃಂದ, ನಿವೃತ್ತ ಪ್ರಾಂಶುಪಾಲರು, ಹಳೆ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರಾಂಶುಪಾಲ ಜಯಶಂಕರ್ ಕೆ. ಸ್ವಾಗತಿಸಿದರು. ದೈಹಿಕ ಶಿಕ್ಷಕ ಜೋಸೆಫ್ ಡಿಸೋಜ ವಂದಿಸಿ, ಅರ್ಥಶಾಸ್ತ್ರ ಉಪನ್ಯಾಸಕಿ ಮಮತಾ ಕಾರ್ಯಕ್ರಮ ನಿರೂಪಿಸಿದರು.


































