ಶಿರ್ವ : ಸಂತ ಮೇರಿ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭವು ಶಿರ್ವದ ಸಾವುದ್ ಸಭಾ ಭವನದಲ್ಲಿ ನಡೆಯಿತು.

ಸುರತ್ಕಲ್ ನ ನಾಗರಿಕ ಸಲಹಾ ಸಮಿತಿಯ ಅಧ್ಯಕ್ಷ ಡಾ. ರಾಜಮೋಹನ್ ರಾವ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಜೀವನದ ಪ್ರಯಾಣದಲ್ಲಿ ನಿಮ್ಮತನವೆಂಬುದು ನಿಮ್ಮಲ್ಲಿರಲಿ, ಎಷ್ಟೋ ಮಕ್ಕಳಿಗೆ ಶಾಲೆಗೆ ಹೋಗಿ ಕಲಿಯುವ ಅವಕಾಶ ಇಲ್ಲ ಆದರೆ ನಿಮಗೆ ಅದು ದೊರಕಿದೆ. ತಂದೆ -ತಾಯಿ, ನಿಸ್ವಾರ್ಥದಿಂದ ಪಾಠ ಮಾಡುವ ಶಿಕ್ಷಕರನ್ನು ನೆನಪಿನಲ್ಲಿಟ್ಟುಕೊಳ್ಳಿ. ಜೀವನದ ಸಂಧ್ಯಾ ಕಾಲದಲ್ಲಿ ಕಾಲೇಜಿನ ಸುಂದರ ನೆನಪುಗಳು ಮೆಲುಕು ಹಾಕುವಂತಿರಬೇಕು ಎಂದರು.
ಶಿರ್ವದ ಅರೋಗ್ಯ ಮಾತಾ ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷ ಮೆಲ್ವಿನ್ ಅರಾನ್ಹ ಮಾತನಾಡಿ, ವಿದ್ಯಾರ್ಥಿಗಳ ಸಂಖ್ಯೆ ಯಲ್ಲಿ ಗಣನೀಯ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆಯಿದೆ ಎಂದರು.
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೆ. ಆರ್ ಪಾಟ್ಕರ್ ಶುಭ ಹಾರೈಸಿದರು.

ಅಧ್ಯಕ್ಷ ಸ್ಥಾನ ವಹಿಸಿದ್ದ ಅತೀ ವಂದನೀಯ ಫಾದರ್ ಡಾ.ಲೆಸ್ಲಿ ಸಿ. ಡಿಸೋಜ ಶಿಕ್ಷಕರ ಬದ್ಧತೆ ಮತ್ತು ಶ್ರಮವನ್ನು ಕೊಂಡಾಡಿದರು. ಪೋಷಕರಿಗೆ ಕಿವಿಮಾತನ್ನು ಹೇಳುತ್ತಾ ತಮ್ಮ ಮಕ್ಕಳನ್ನು ಪ್ರೀತಿಸುತ್ತಾ ಅವರ ಉನ್ನತಿಗೆ ಪ್ರೋತ್ಸಾಹ ನೀಡಿ ಎಂದು ಕರೆಕೊಟ್ಟರು.
ಕಾರ್ಯಕ್ರಮದಲ್ಲಿ ಸಂತ ಮೇರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಜಯಶಂಕರ್ ಕೆ., ಪ್ರಾಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಸಬೀನ ಪ್ರಿಯ ನೋರೊನ್ಹ, ಡೋನ್ ಬೋಸ್ಕೋ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಸಂಧ್ಯಾ ಮೆಂಡೋನ್ಸ, ಪ್ರಾಥಮಿಕ ಶಾಲಾ ವಿಭಾಗದ ನಾಯಕಿ ಪೂರ್ವಿತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿ ನಾಯಕಿ ಜೆನೀಶಿಯ ಕಾಸ್ಟಲೀನೋ ಎಲ್ಲರನ್ನು ಸ್ವಾಗತಿಸಿದರು. ಹನಿಯಲ್ ವಿನ್ರೋಯ್ ಡಿಸೋಜ ಮತ್ತು ಚಾರಿತ್ರ್ಯ ಕಾರ್ಯಕ್ರಮ ನಿರೂಪಿಸಿ, ವಿಘ್ನೇಶ್ ವಂದಿಸಿದರು.
ಬಳಿಕ ವಿದ್ಯಾರ್ಥಿಗಳಿಂದ ಮನರಂಜನಾ ಕಾರ್ಯಕ್ರಮಗಳು ಜರುಗಿದವು.


































