ಬೈಂದೂರು: ತಂದೆ ತಾಯಿ ಕಂಡ ಕನಸಿನಂತೆ ಕೊಲ್ಲೂರಿನ 24ರ ಹರೆಯದ ಯುವತಿ ವಿದ್ಯಾ ಸೇನೆಗೆ ಆಯ್ಕೆಯಾಗಿದ್ದಾರೆ. ಉಡುಪಿ ಜಿಲ್ಲೆಯ ಕೊಲ್ಲೂರು ಸಮೀಪದ ಯಳಜಿತ್ ನ ಬಡ ಕೂಲಿ ಕಾರ್ಮಿಕ ರಮೇಶ್ ಗೌಡ ಮತ್ತು ಪಾರ್ವತಿ ಗೌಡ ದಂಪತಿ ಮಗಳಾದ ವಿದ್ಯಾ ಪೋಷಕರ ಕನಸನ್ನು ನನಸು ಮಾಡಿದ್ದಾರೆ.
ಯಳಜಿತ್ ನ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಆರಂಭಿಸಿ, ಕೊಲ್ಲೂರಿನ ಮೂಕಾಂಬಿಕಾ ಹೈಸ್ಕೂಲ್ ನಲ್ಲಿ ಪ್ರೌಢ ಶಿಕ್ಷಣವನ್ನು ಪೂರೈಸಿದರು. ಕುಂದಾಪುರದ ಭಂಡಾರರ್ಸಕಾರ್ಸ್ ಕಾಲೇಜಿನಲ್ಲಿ ಪದವಿ ಪಡೆದು, ಕೋಡಿ ಬ್ಯಾರಿಸ್ ಕಾಲೇಜಿನಲ್ಲಿ ಬಿಎಡ್ ಶಿಕ್ಷಣ ಪಡೆಯುತ್ತಿದ್ದಾಗಲೇ ಸೇನೆಗೆ ಸೇರಲು ಅವಕಾಶ ದೊರಕಿದೆ.

2018 ರಲ್ಲಿ ಆಯ್ಕೆ ಪ್ರಕ್ರಿಯೆ ಪ್ರಾರಂಭಗೊಂಡಿತ್ತು. ಸೇನೆಯ ಎಲ್ಲಾ ಪರೀಕ್ಷೆಗಳನ್ನು ಎದುರಿಸಿದ ಬಳಿಕ ಕೊರೋನಾ ಕಾರಣದಿಂದ ಅಂತಿಮ ಪಟ್ಟಿ ಬರಲು ತಡವಾಗಿತ್ತು. ಈಗ ಅಂತಿಮ ಪಟ್ಟಿಯಲ್ಲಿ ವಿದ್ಯಾ ಆಯ್ಕೆಯಾಗಿದ್ದು ಭಾರತೀಯ ಸೇನೆಯ ಬಿ.ಎಸ್.ಎಫ್ ಗೆ ಆಯ್ಕೆಯಾಗಿದ್ದಾರೆ.

ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಮಿಂಚಿರುವ ಪ್ರತಿಭೆ:
ಕ್ರೀಡಾ ಕ್ಷೇತ್ರದಲ್ಲಿ ತನ್ನದೇ ವಿಶಿಷ್ಟ ಸಾಧನೆಯ ಮೂಲಕ ಕುಗ್ರಾಮದ ವಿದ್ಯಾರ್ಥಿನಿಯೋರ್ವಳು ರಾಜ್ಯ, ರಾಷ್ರ್ಟ ಮಟ್ಟದಲ್ಲಿ ಮಿಂಚಿದ್ದಾಳೆ. ಪ್ರಸ್ತುತ ಬಿ ಎಸ್ ಎಫ್ ಗೆ ಆಯ್ಕೆಯಾಗಿರುವ ವಿದ್ಯಾ ನೆಟ್ ಬಾಲ್ ನಲ್ಲಿ, 5 ಬಾರಿ ರಾಜ್ಯ 1 ಬಾರಿ ರಾಷ್ಟ್ರ ಮಟ್ಟದ ತಂಡದಲ್ಲಿ ಗುರುತಿಸಿಕೊಂಡಿದ್ದಾಳೆ. ಆಥ್ಲೆಟಿಕ್ಸ್ ನಲ್ಲಿ 6 ಬಾರಿ ರಾಜ್ಯ ಮಟ್ಟದಲ್ಲಿ ಪೋಲ್ ವಾಲ್ಟ್ ನಲ್ಲಿ ಕಂಚಿನ ಪದಕವನ್ನು ಪಡೆದಿದ್ದಾರೆ. ಕ್ರೀಡಾ ಸಾಧನೆಗಾಗಿ ಕರ್ನಾಟಕದ ಕ್ರೀಡಾ ಇಲಾಖೆ ಕೊಡಮಾಡುವ ಚೈತ್ರದ ಚಿಗುರು ರಾಜ್ಯ ಪ್ರಶಸ್ತಿಯನ್ನು ಪಡೆದಿದ್ದಾರೆ. ಪ್ರಸ್ತುತ ಬಿ.ಎಸ್.ಎಫ್ ತರಬೇತಿಗಾಗಿ ಮಧ್ಯಪ್ರದೇಶಕ್ಕೆ ಯುವತಿ ತೆರಳಿದ್ದು, ತರಬೇತಿ ಮುಗಿದ ನಂತರ ವೃತ್ತಿ ಆರಂಭಿಸಲಿದ್ದಾರೆ.


ತಂದೆ – ತಾಯಿಯೇ ಪ್ರೇರಣೆ : ವಿದ್ಯಾ
ಹೆಣ್ಣುಮಕ್ಕಳನ್ನು ಮನೆಯಿಂದಲೇ ಹೊರಗೆ ಕಳಿಸದೇ ಇರುವವರು ಇದ್ದಾರೆ, ಅಂತಹದರಲ್ಲಿ ನನ್ನನ್ನು ಸೇನೆ ಸೇರಲು ಪ್ರೇರಣೆ ನೀಡಿದ ನನ್ನ ತಂದೆ ತಾಯಿಗೆ ಧನ್ಯವಾದಗಳು. ಎಲ್ಲಾ ಗುರುಗಳಿಗೂ ವಂದನೆಗಳು. ಅಪ್ಪ ಅಮ್ಮನ ಕನಸಿನಂತೆ ಸೇನೆಗೆ ಸೇರಿದ್ದೇನೆ. ಮಾಡುವ ಕೆಲಸವನ್ನು ಶ್ರದ್ದೆ, ನಿಷ್ಠೆಯಿಂದ ಮಾಡಲು ಅಪ್ಪ, ಅಮ್ಮ ಹೇಳಿಕೊಟ್ಟಿದ್ದಾರೆ. ಅದರಂತೆ ಮುಂದುವರಿಯುತ್ತೇನೆ. ನಮ್ಮ ಜಿಲ್ಲೆಯಿಂದ ಹೆಚ್ಚಿನ ಯುವಕ ಯುವತಿಯರು ಭಾರತೀಯ ಸೇನೆಗೆ ಸೇರಲಿ ಎಂದು ಹೇಳಿದ್ದಾರೆ.
ವರದಿ : ದಿನೇಶ್ ರಾಯಪ್ಪನಮಠ






































