ಬ್ರಹ್ಮಾವರ : ಕೋವಿಡ್ ಹಿನ್ನೆಲೆಯಲ್ಲಿ ಆಂಶಿಕ ಲಾಕ್ ಡೌನ್ ಆದ ಕಾರಣ ಇದೀಗ ಸರಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ಪಡೆಯುವವರ ಸಂಖ್ಯೆ ಹೆಚ್ಚಳವಾಗುತ್ತಿರುವುದು ಕಂಡು ಬಂದಿದೆ. ಗ್ರಾಮೀಣ ಭಾಗವಾದ ಬಾರಕೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಂದು ಕೋವಿಡ್ ಲಸಿಕೆ ಪಡೆಯುವವರು ಮತ್ತು ಈ ಹಿಂದೆ ಪಡೆದವರು, ಪುನಃ ಪಡೆಯುವವರ ಸಂಖ್ಯೆ ನೂರರ ಗಡಿದಾಟುತ್ತಿದೆ . ಇಲ್ಲಿನ ಆರೋಗ್ಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಆಶಾಕಾರ್ಯಕರ್ತೆಯರು ಲಸಿಕೆ ಪಡೆಯುವವರಿಗೆ ಸೂಕ್ತ ವ್ಯವಸ್ಥೆ ಮಾಡುತ್ತಿದ್ದು ತೀವ್ರ ಆಸಕ್ತಿ ವಹಿಸುತ್ತಿದ್ದಾರೆ.

ಬಾರಕೂರು ಭಾಗದ ಅನೇಕ ವಾಣಿಜ್ಯೋದ್ಯಮಿಗಳು, ಕೃಷಿ ಕೂಲಿ ಕಾರ್ಮಿಕರು, ಮದ್ಯಮ ವರ್ಗದ ಜನರು ಸೇರಿದಂತೆ ಸರಕಾರಿ ಆಸ್ಪತ್ರೆಯನ್ನು ಕಾಣದ ಜನರು ಕೂಡಾ ಸಾಮಾಜಿಕ ಅಂತರದಲ್ಲಿ ಸರತಿಯ ಸಾಲಿನಲ್ಲಿ ಬಂದು ಲಸಿಕೆ ಪಡೆಯುತ್ತಿದ್ದಾರೆ. ಲಸಿಕೆ ಪಡೆದ ಬಳಿಕ ಇಲ್ಲಿನ ರೆಸ್ಟ್ ರೂಂ ನಲ್ಲಿ ಕೆಲಹೊತ್ತು ಕುಳಿತು ಬಳಿಕ ಹೋಗುತ್ತಾರೆ. ಕಳೆದ ಕೆಲವು ದಿನದಿಂದ ಲಸಿಕೆ ಪಡೆಯಲು ಹಲವಾರು ಜನಜಾಗೃತಿ ಮಾಡಿದರೂ ಆಲಸ್ಯ ಮಾಡುತ್ತಿದ್ದ ಜನರು ಇದೀಗ ಸ್ವಯಂ ಸ್ಪೂರ್ತಿಯಿಂದ ಬಂದು ಸರಕಾರದ ನಿಯಮವನ್ನು ಪಾಲನೆ ಮಾಡುವುದು ಕಂಡುಬರುತ್ತಿದೆ.
ವರದಿ : ಬಿ.ಎಸ್.ಆಚಾರ್ಯ





































